ADVERTISEMENT

‘ಆರ್ಥಿಕ ಪ್ರಗತಿ ಸುಲಭವಲ್ಲ’

​ಪ್ರಜಾವಾಣಿ ವಾರ್ತೆ
Published 28 ಮೇ 2019, 18:38 IST
Last Updated 28 ಮೇ 2019, 18:38 IST

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಹೊಸ ಸರ್ಕಾರಕ್ಕೆ ಆರ್ಥಿಕ ಪ್ರಗತಿ ಸಾಧಿಸುವುದು ಅಷ್ಟೇನೂ ಸುಲಭವಾಗಿಲ್ಲ ಎಂದು ಇಂಡಿಯಾ ರೇಟಿಂಗ್ಸ್‌ ಸಂಸ್ಥೆ ಅಭಿಪ್ರಾಯಪಟ್ಟಿದೆ.

ವಿತ್ತೀಯ ಅಥವಾ ಹಣಕಾಸು ನೀತಿಗಳ ಮೂಲಕ ಆರ್ಥಿಕ ಬೆಳವಣಿಗೆ ಸಾಧಿಸುವುದು ಅನುಮಾನ. ಏಕೆಂದರೆ, ಕೌಟುಂಬಿಕ ಉಳಿತಾಯದಲ್ಲಿ ಇಳಿಕೆ ಕಂಡುಬರುತ್ತಿದೆ. ಬ್ಯಾಂಕ್‌ಗಳೂ ಸಹ ಬಡ್ಡಿದರ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿವೆ ಎಂದು ಹೇಳಿದೆ.

2017–18ರಲ್ಲಿ ಕುಟುಂಬದ ಉಳಿತಾಯವು ಜಿಡಿಪಿಯ ಶೇ 17.2ಕ್ಕೆ ಇಳಿಕೆಯಾಗಿದೆ. ಇದು 1997–98ರ ನಂತರದ ಕನಿಷ್ಠ ಮಟ್ಟವಾಗಿದೆ. 2009–10ರಲ್ಲಿ ಕುಟುಂಬದ ಉಳಿತಾಯ ಪ್ರಮಾಣ ಶೇ 25.2ರಷ್ಟು ಗರಿಷ್ಠ ಮಟ್ಟದಲ್ಲಿತ್ತು ಎಂದು ಆರ್‌ಬಿಐ ಮಾಹಿತಿ ನೀಡಿತ್ತು.

ADVERTISEMENT

ಕೌಟುಂಬಿಕ ಉಳಿತಾಯವಷ್ಟೇ ಅಲ್ಲ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ವಸೂಲಿಯಾಗದ ಸಾಲದ (ಎನ್‌ಪಿಎ) ಪ್ರಮಾಣದಿಂದ ಬಳಲುತ್ತಿವೆ. ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ನಗದು ಕೊರತೆಯ ಸಂಕಷ್ಟದಲ್ಲಿವೆ. ಈ ಅಂಶಗಳೂ ಆರ್ಥಿಕ ಬೆಳವಣಿಗೆ ಸಾಧಿಸಲು ಹೊಸ ಸರ್ಕಾರಕ್ಕೆ ಸವಾಲಾಗಲಿವೆ ಎಂದೂ ವಿಶ್ಲೇಷಣೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.