ADVERTISEMENT

ಸವಾಲು ಎದುರಿಸುತ್ತಿರುವ ಆರ್ಥಿಕತೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿಕೆ

ಪಿಟಿಐ
Published 10 ನವೆಂಬರ್ 2019, 16:39 IST
Last Updated 10 ನವೆಂಬರ್ 2019, 16:39 IST
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಿರ್ಮಲಾ ಸೀತಾರಾಮನ್‌ ಅವರ ಜತೆ, ಪುಸ್ತಕ ಬರೆದಿರುವ ವಿ. ಅನಂತ್‌ ನಾಗೇಶ್ವರನ್‌, ಜಿ. ನಟರಾಜನ್‌ ಪ್ರಧಾನಿ ಆರ್ಥಿಕ ಸಲಹಾ ಮಂಡಳಿ ಅಧ್ಯಕ್ಷ ವಿವೇಕ್‌ ದೇಬರಾಯ್‌  ಉಪಸ್ಥಿತರಿದ್ದರು – ಪಿಟಿಐ ಚಿತ್ರ
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಿರ್ಮಲಾ ಸೀತಾರಾಮನ್‌ ಅವರ ಜತೆ, ಪುಸ್ತಕ ಬರೆದಿರುವ ವಿ. ಅನಂತ್‌ ನಾಗೇಶ್ವರನ್‌, ಜಿ. ನಟರಾಜನ್‌ ಪ್ರಧಾನಿ ಆರ್ಥಿಕ ಸಲಹಾ ಮಂಡಳಿ ಅಧ್ಯಕ್ಷ ವಿವೇಕ್‌ ದೇಬರಾಯ್‌  ಉಪಸ್ಥಿತರಿದ್ದರು – ಪಿಟಿಐ ಚಿತ್ರ   

ನವದೆಹಲಿ: ‘ದೇಶಿ ಆರ್ಥಿಕತೆಯು ಸದ್ಯಕ್ಕೆ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ವಿಶ್ಲೇಷಿಸಿದ್ದಾರೆ.

ಭಾನುವಾರ ಇಲ್ಲಿ ನಡೆದ ಜಾಗತಿಕ ಹಣಕಾಸಿಗೆ ಸಂಬಂಧಿಸಿದ ‘ದಿ ರೈಸ್‌ ಆಫ್ ಫೈನಾನ್ಸ್‌: ಕಾಸಸ್‌, ಕಾನ್ಸಿಕೆನ್ವಸ್‌ ಆ್ಯಂಡ್ ಕ್ಯೂರ್‌’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

‘ಜಾಗತಿಕ ಮತ್ತು ಭಾರತದ ಆರ್ಥಿಕತೆ ಎದುರಿಸುತ್ತಿರುವ ಪ್ರಸ್ತುತ ಆರ್ಥಿಕ ಸಮಸ್ಯೆಗಳನ್ನು ಅರ್ಥೈಸಿಕೊಳ್ಳಲು ಈ ಪುಸ್ತಕ ನೆರವಾಗಲಿದೆ. ವಿಶ್ವದಾದ್ಯಂತ ಅರ್ಥ ವ್ಯವಸ್ಥೆಗಳು ಎದುರಿಸುತ್ತಿರುವ ಸವಾಲುಗಳಿಗೆ ಈ ಪುಸ್ತಕದಲ್ಲಿ ಪರಿಹಾರಗಳೂ ಇವೆ’ ಎಂದರು.

ADVERTISEMENT

‘ದೇಶಿ ಆರ್ಥಿಕತೆಯು ಮಂದಗತಿ ಬೆಳವಣಿಗೆ ಕಾಣುತ್ತಿರುವ ಸದ್ಯದ ಸಂದರ್ಭದಲ್ಲಿ ಉದ್ಭವಿಸಿರುವ ಹತ್ತಾರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು, ಬೆಳವಣಿಗೆಯ ಸ್ವರೂಪ ತಿಳಿದುಕೊಳ್ಳಲು ಮತ್ತು ಈ ಬಿಕ್ಕಟ್ಟನ್ನು ಸಮರ್ಪಕವಾಗಿ ಅರ್ಥೈಸಿಕೊಳ್ಳಲು ಈ ಪುಸ್ತಕ ನೆರವಾಗಲಿದೆ. ಆರ್ಥಿಕ ನೀತಿಗಳನ್ನು ರೂಪಿಸುವವರಿಗೂ ಈ ಪುಸ್ತಕ ಹೆಚ್ಚು ಉಪಯುಕ್ತವಾಗಿರಲಿದೆ.

‘ವಿಶ್ವದಾದ್ಯಂತ ಹಣಕಾಸು ಸಂಸ್ಥೆಗಳು ಮತ್ತು ಹಣಕಾಸು ಮಾರುಕಟ್ಟೆಯ ಗಾತ್ರದಲ್ಲಿ ಆಗಿರುವ ಹೆಚ್ಚಳ, ಇವುಗಳು ಬೀರಿರುವ ವ್ಯಾಪಕ ಸ್ವರೂಪದ ಪ್ರಭಾವಗಳ ಬಗ್ಗೆ ಪುಸ್ತಕದಲ್ಲಿ ವಿವರಗಳಿವೆ. ಜಾಗತಿಕ ಮತ್ತು ಭಾರತದ ಆರ್ಥಿಕತೆಗಳು ಸದ್ಯಕ್ಕೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನೂ ಉಲ್ಲೇಖಿಸಲಾಗಿದೆ’ ಎಂದು ಹೇಳಿದ್ದಾರೆ.

ಭಾರತದ ಆರ್ಥಿಕ ವೃದ್ಧಿ ದರವು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 6 ವರ್ಷಗಳ ಹಿಂದಿನ ಕನಿಷ್ಠ ಮಟ್ಟವಾದ ಶೇ 5ಕ್ಕೆ ಕುಸಿದಿದೆ. ಗ್ರಾಹಕರ ಬೇಡಿಕೆಯಲ್ಲಿ ಗಣನೀಯ ಇಳಿಕೆ, ಖಾಸಗಿ ಬಂಡವಾಳ ಹೂಡಿಕೆಯಲ್ಲಿ ಖೋತಾ ಮತ್ತು ಜಾಗತಿಕ ವಿದ್ಯಮಾನಗಳ ಕಾರಣಕ್ಕೆ ‘ಜಿಡಿಪಿ’ ವೃದ್ಧಿ ದರ ಕನಿಷ್ಠ ಮಟ್ಟದಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.