ADVERTISEMENT

ಭಾರತದ ಆರ್ಥಿಕ ವೃದ್ಧಿ ದರ ಶೇ 6.6 ಪ್ರಗತಿ: ಒಇಸಿಡಿ ಅಂದಾಜು

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 21:57 IST
Last Updated 2 ನವೆಂಬರ್ 2019, 21:57 IST
   

ನವದೆಹಲಿ: ಭಾರತದ ಆರ್ಥಿಕ ವೃದ್ಧಿ ದರವು 2020 ರಿಂದ 2024ರ ಅವಧಿಯಲ್ಲಿ ಶೇ 6.6ರಷ್ಟು ಇರಲಿದೆ ಎಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆಯು (ಒಇಸಿಡಿ) ಅಂದಾಜಿಸಿದೆ.

ಈ ವೃದ್ಧಿ ದರವು, 2013 ರಿಂದ 2017ರ ಅವಧಿಯಲ್ಲಿನ ವೃದ್ಧಿ ದರದ ಸರಾಸರಿಗಿಂತ ಕಡಿಮೆ ಇರಲಿದೆ ಎಂದು ಸಂಘಟನೆಯು ದಕ್ಷಿಣ ಏಷ್ಯಾ, ಚೀನಾ ಮತ್ತು ಭಾರತಕ್ಕೆ ಸಂಬಂಧಿಸಿದ ಮುನ್ನೋಟದ ವರದಿಯಲ್ಲಿ ತಿಳಿಸಿದೆ. ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಆಗ್ನೇಯ ಏಷ್ಯಾ ದೇಶಗಳ ಸಂಘಟನೆಯ (ಆಸಿಯಾನ್‌) ಶೃಂಗಸಭೆಯಲ್ಲಿ ಈ ವರದಿ ಮಂಡಿಸಲಾಗಿದೆ.

ಬ್ಯಾಂಕಿಂಗ್ ವಲಯದ ಹಣಕಾಸು ಪರಿಸ್ಥಿತಿ ಸುಧಾರಿಸಲು ನಿರಂತರವಾಗಿ ಪ್ರಯತ್ನಿಸುವುದು ಪ್ರಮುಖ ಸವಾಲಾಗಿದೆ. ಬಂಡವಾಳ ಹೂಡಿಕೆ ಹೆಚ್ಚಿಸಲು ಮತ್ತು ಹಣಕಾಸಿನ ಅವಕಾಶಗಳನ್ನು ವಿಸ್ತರಿಸಲು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಮೂಲ ಸೌಕರ್ಯ ಯೋಜನೆಗಳಲ್ಲಿನ ತಾರತಮ್ಯವನ್ನು ನಿವಾರಿಸಲು ಆದ್ಯತೆ ನೀಡಬೇಕಾಗಿದೆ. ಈಗಾಗಲೇ ಜಾರಿಯಲ್ಲಿ ಇರುವ ಮೂಲಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸುವುದರಿಂದ ಬೇಡಿಕೆ ಹೆಚ್ಚಳಕ್ಕೆ ಉತ್ತೇಜನ ಸಿಗಲಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

ADVERTISEMENT

ತಯಾರಿಕಾ ವಲಯದ ಮಂದ ಪ್ರಗತಿ
ನವದೆಹಲಿ (ಪಿಟಿಐ):
ದೇಶದಲ್ಲಿ ತಯಾರಿಕೆ ಚಟುವಟಿಕೆಗಳು ಕುಂಠಿತಗೊಂಡಿದ್ದು, ಅಕ್ಟೋಬರ್‌ ತಿಂಗಳಲ್ಲಿ ಕಾರ್ಖಾನೆಗಳಿಗೆ ಸಲ್ಲಿಕೆಯಾದ ಸರಕುಗಳ ಬೇಡಿಕೆ ಮತ್ತು ತಯಾರಿಕೆ ಪ್ರಮಾಣವು ಎರಡು ವರ್ಷಗಳಲ್ಲಿಯೇ ಕಡಿಮೆ ಮಟ್ಟದಲ್ಲಿ ದಾಖಲಾಗಿದೆ.

ಮರ್ಕಿಟ್‌ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ (ಪಿಎಂಐ), ಸೆ‍ಪ್ಟೆಂಬರ್‌ನಲ್ಲಿನ 51.4 ರಿಂದ ಅಕ್ಟೋಬರ್‌ನಲ್ಲಿ 50.6ಕ್ಕೆ ಇಳಿದಿದೆ.

ತಯಾರಿಕಾ ವಲಯದಲ್ಲಿನ ಬೆಳವಣಿಗೆಯು ಅಲ್ಪಮಟ್ಟಿಗಿನ ಸುಧಾರಣೆ ಕಂಡಿರುವುದನ್ನು ಇದು ಸೂಚಿಸುತ್ತದೆ. 50ಕ್ಕಿಂತ ಹೆಚ್ಚಿಗೆ ಇದ್ದರೆ ಬೆಳವಣಿಗೆ ಮತ್ತು ಅದಕ್ಕಿಂತ ಕಡಿಮೆ ಇದ್ದರೆ ಪ್ರಗತಿ ಕುಸಿತ ಎಂದು ಪರಿಗಣಿಸಲಾಗುತ್ತಿದೆ.

ಐಎಚ್‌ಎಸ್‌ ಮರ್ಕಿಟ್‌ ಸಮೀಕ್ಷೆ ಪ್ರಕಾರ, ತಯಾರಿಕಾ ವಲಯದಲ್ಲಿನ ಕಾರ್ಖಾನೆಗಳಿಗೆ ಸಲ್ಲಿಕೆಯಾದ ಸರಕುಗಳ ಬೇಡಿಕೆ ಮತ್ತು ತಯಾರಿಕೆ ಪ್ರಮಾಣವು ಕಡಿಮೆ ಇದೆ. ಇದರಿಂದಾಗಿ ಹೊಸ ಉದ್ಯೋಗ ಅವಕಾಶಗಳ ಸೃಷ್ಟಿಯು 6 ತಿಂಗಳ ಮಟ್ಟಕ್ಕೆ ಇಳಿದಿದೆ. ಕಂಪನಿಗಳು ಹೆಚ್ಚಿನ ಪ್ರಮಾಣದಲ್ಲಿ ಸರಕುಗಳನ್ನು ದಾಸ್ತಾನು ಇಟ್ಟುಕೊಳ್ಳಲು ಹಿಂದೇಟು ಹಾಕುತ್ತಿವೆ. ಇದೇ ಕಾರಣಕ್ಕೆ ಕಚ್ಚಾ ಸರಕು ಖರೀದಿ ಪ್ರಮಾಣವನ್ನೂ ತಗ್ಗಿಸಿವೆ.

ಬೇಡಿಕೆ ಪ್ರಮಾಣ ತಗ್ಗಿರುವುದರಿಂದ ಸರಕುಗಳನ್ನು ತಯಾರಿಸುವ ಕೈಗಾರಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಕಂಡು ಬರುತ್ತಿದೆ. ಇದರಿಂದ ತಯಾರಿಕೆ ಕುಂಠಿತಗೊಳ್ಳುತ್ತದೆ. ಹೊಸ ಉದ್ಯೋಗ ಸೃಷ್ಟಿ ಕಡಿಮೆಯಾಗುತ್ತವೆ. ವಹಿವಾಟು ವಿಸ್ತರಣೆಯ ಅವಕಾಶಗಳೂ ಕಡಿಮೆಯಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.