ನವದೆಹಲಿ: ನೌಕರರನ್ನು ಇಪಿಎಫ್‌ಒ ನೆರವಿನೊಂದಿಗೆ ಸಂಘಟಿತ ಸಾಮಾಜಿಕ ಭದ್ರತಾ ವ್ಯವಸ್ಥೆಯ ವ್ಯಾಪ್ತಿಗೆ ತರುವ ‘ನೌಕರರ ನೋಂದಣಿ ಅಭಿಯಾನ 2025’ಕ್ಕೆ ಚಾಲನೆ ನೀಡುವುದಾಗಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಸೋಮವಾರ ಹೇಳಿದೆ.
ಈ ಯೋಜನೆಯು ನವೆಂಬರ್ 1ರಿಂದ 2026ರ ಏಪ್ರಿಲ್ 30ರವರೆಗೆ ಜಾರಿಯಲ್ಲಿ ಇರಲಿದೆ ಎಂದು ಸಚಿವಾಲಯ ಹೇಳಿದೆ. ನೌಕರರ ಭವಿಷ್ಯ ನಿಧಿ ಕಾಯ್ದೆಯ ವ್ಯಾಪ್ತಿಯಲ್ಲಿ ಈಗಾಗಲೇ ಇರುವ, ಕಾಯ್ದೆಯ ವ್ಯಾಪ್ತಿಗೆ ಹೊಸದಾಗಿ ಬಂದಿರುವ ಉದ್ಯೋಗದಾತರು ತಮ್ಮಲ್ಲಿನ ಅರ್ಹ ಉದ್ಯೋಗಿಗಳ ಹೆಸರನ್ನು ಸ್ವಇಚ್ಛೆಯಿಂದ ನೋಂದಾಯಿಸುವುದಕ್ಕೆ ಪ್ರೊತ್ಸಾಹಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ.
2017ರ ಜುಲೈ 1ರಿಂದ 2025ರ ಅಕ್ಟೋಬರ್ 31ರ ನಡುವೆ ನೌಕರಿಗೆ ಸೇರಿದ, ನೌಕರಿಯಲ್ಲಿ ಮುಂದುವರಿದಿರುವ, ಆದರೆ ಇಪಿಎಫ್ ಯೋಜನೆಯ ಅಡಿ ಯಾವುದೇ ಕಾರಣದಿಂದ ನೋಂದಣಿ ಮಾಡಿಸದ ನೌಕರರ ಹೆಸರನ್ನು ಉದ್ಯೋಗದಾತರು ಈ ಅಭಿಯಾನದ ಸಂದರ್ಭದಲ್ಲಿ ನೀಡಬಹುದು.
ಈ ಅಭಿಯಾನದಲ್ಲಿ ಹೆಸರು ನೋಂದಾಯಿಸಿದರೆ, 2017ರ ಜುಲೈ 1ರಿಂದ 2025ರ ಅಕ್ಟೋಬರ್ 31ರವರೆಗಿನ ಅವಧಿಗೆ ಇಪಿಎಫ್‌ಒ ನಿಧಿಗೆ ಕೊಡಬೇಕಿರುವ ನೌಕರರ ಪಾಲನ್ನು ಮನ್ನಾ ಮಾಡಲಾಗುತ್ತದೆ. ನೌಕರರ ಸಂಬಳದಲ್ಲಿ ಪಿಎಫ್ ವಂತಿಗೆ ಮೊತ್ತ ಕಡಿತ ಆಗದಿದ್ದ ಸಂದರ್ಭದಲ್ಲಿ ಮಾತ್ರ ಈ ಮನ್ನಾ ಸೌಲಭ್ಯ ಅನ್ವಯವಾಗುತ್ತದೆ. ಆದರೆ ಉದ್ಯೋಗದಾತರು ತಮ್ಮ ಪಾಲಿನ ಮೊತ್ತವನ್ನು ಕೊಡಬೇಕಾಗುತ್ತದೆ.
ಅಭಿಯಾನದ ಅಡಿಯಲ್ಲಿ ಈ ಸೌಲಭ್ಯವನ್ನು ಪಡೆದುಕೊಳ್ಳುವ ಉದ್ಯೋಗದಾತರು ದಂಡದ ರೂಪದಲ್ಲಿ ₹100 ಪಾವತಿಸಿದರೆ ಸಾಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.