ADVERTISEMENT

ಕೋವಿಡ್: ಪಿಎಫ್‌ ಹಣ ಹಿಂಪಡೆಯಲು ಮತ್ತೆ ಅವಕಾಶ

ಪಿಟಿಐ
Published 31 ಮೇ 2021, 13:25 IST
Last Updated 31 ಮೇ 2021, 13:25 IST
   

ನವದೆಹಲಿ: ಕೋವಿಡ್‌ ಎರಡನೆಯ ಅಲೆಯ ಹಿನ್ನೆಲೆಯಲ್ಲಿ, ಭವಿಷ್ಯನಿಧಿ (ಪಿ.ಎಫ್‌.) ಖಾತೆಯಲ್ಲಿ ಇರುವ ಮೊತ್ತವನ್ನು ಹಿಂದಕ್ಕೆ ಪಡೆಯಲು ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್‌ಒ) ಸಂಘಟನೆಯು ಎರಡನೆಯ ಬಾರಿಗೆ ಅವಕಾಶ ಕಲ್ಪಿಸಿದೆ.

ಸಾಂಕ್ರಾಮಿಕದ ಕಾರಣದಿಂದಾಗಿ ಎದುರಾಗುವ ಹಣಕಾಸಿನ ತುರ್ತುಗಳನ್ನು ನಿಭಾಯಿಸಲು ಪಿ.ಎಫ್. ಖಾತೆಯಲ್ಲಿನ ಹಣ ಹಿಂದಕ್ಕೆ ಪಡೆಯಲು ಇಪಿಎಫ್‌ಒ ಹಿಂದಿನ ವರ್ಷ ಅವಕಾಶ ನೀಡಿತ್ತು. ಪಿ.ಎಫ್. ಖಾತೆದಾರರು ಮೂರು ತಿಂಗಳ ಮೂಲವೇತನ (ಮೂಲ ವೇತನ ಮತ್ತು ಡಿ.ಎ.ಯ ಒಟ್ಟು ಮೊತ್ತ) ಅಥವಾ ಖಾತೆಯಲ್ಲಿ ಇರುವ ಒಟ್ಟು ಮೊತ್ತದ ಶೇಕಡ 75ರಷ್ಟರಲ್ಲಿ ಯಾವುದು ಕಡಿಮೆ ಮೊತ್ತವೋ ಅಷ್ಟನ್ನು ಹಿಂದಕ್ಕೆ ಪಡೆಯಬಹುದಿತ್ತು. ಅದಕ್ಕಿಂತ ಕಡಿಮೆ ಮೊತ್ತ ಪಡೆಯುವ ಅವಕಾಶವೂ ಇತ್ತು.

‘ಈಗ ಎರಡನೆಯ ಬಾರಿಗೆ ಹಣ ಹಿಂದಕ್ಕೆ ಪಡೆಯಲು ಅವಕಾಶ ನೀಡಲಾಗಿದೆ’ ಎಂದು ಕೇಂದ್ರ ಕಾರ್ಮಿಕ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಇದುವರೆಗೆ ಪಿ.ಎಫ್. ಖಾತೆಗಳಿಂದ ಕೋವಿಡ್‌ ಕಾರಣಕ್ಕಾಗಿ ಒಟ್ಟು ₹ 18,698 ಕೋಟಿ ಹಿಂದಕ್ಕೆ ಪಡೆಯಲಾಗಿದೆ.

ADVERTISEMENT

ಮೊದಲ ಅಲೆಯ ಸಂದರ್ಭದಲ್ಲಿ ಕೋವಿಡ್‌ ಕಾರಣಕ್ಕಾಗಿ ಹಣ ಹಿಂದಕ್ಕೆ ಪಡೆದಿದ್ದವರೂ, ಈಗ ಮತ್ತೆ ಹಣ ಹಿಂಪಡೆಯಲು ಅವಕಾಶ ಇದೆ. ಹಣ ಹಿಂದಕ್ಕೆ ಪಡೆಯಲು ಅರ್ಜಿ ಸಲ್ಲಿಸಿದ ಮೂರು ದಿನಗಳಲ್ಲಿ ಅದನ್ನು ಇತ್ಯರ್ಥಪಡಿಸಲು ಇಪಿಎಫ್‌ಒ ಬದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.