ADVERTISEMENT

ಈಕ್ವಿಟಿ ಮ್ಯೂಚುವಲ್‌ ಫಂಡ್‌: ₹40 ಸಾವಿರ ಕೋಟಿ ಹೂಡಿಕೆ

ಪಿಟಿಐ
Published 7 ನವೆಂಬರ್ 2021, 10:54 IST
Last Updated 7 ನವೆಂಬರ್ 2021, 10:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹ 40 ಸಾವಿರ ಕೋಟಿ ಬಂಡವಾಳ ಸೆಳೆದಿವೆ. ಇವು ಜೂನ್‌ ತ್ರೈಮಾಸಿಕದಲ್ಲಿ ₹ 19,508 ಕೋಟಿ ಬಂಡವಾಳ ಆಕರ್ಷಿಸಿದ್ದವು. ಇದಕ್ಕೆ ಹೋಲಿಸಿದರೆ ಈ ಬಾರಿ ಸುಮಾರು ಎರಡು ಪಟ್ಟು ಹೆಚ್ಚಳ ಆಗಿದೆ.

ನ್ಯೂ ಫಂಡ್‌ ಆಫರ್‌ಗಳಲ್ಲಿ (ಎನ್‌ಎಫ್‌ಒ) ಹೆಚ್ಚಿನ ಒಳಹರಿವು ಮತ್ತು ಎಸ್‌ಐಪಿಯಲ್ಲಿ (ವ್ಯವಸ್ಥಿತ ಹೂಡಿಕೆ ಯೋಜನೆ) ಸ್ಥಿರವಾದ ಹೂಡಿಕೆಯಿಂದಾಗಿ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಈ ಪ್ರಮಾಣದ ಹೂಡಿಕೆ ಆಗಿದೆ. ಇದರಿಂದಾಗಿ ಸೆಪ್ಟೆಂಬರ್ ತ್ರೈಮಾಸಿಕದ ಕೊನೆಯಲ್ಲಿ ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳ ನಿರ್ವಹಣಾ ಸಂಪತ್ತು ಮೌಲ್ಯವು ₹ 12.8 ಲಕ್ಷ ಕೋಟಿಗೆ ತಲುಪಿದೆ. ಜೂನ್‌ ತ್ರೈಮಾಸಿಕದ ಅಂತ್ಯದಲ್ಲಿ ಇದು ₹ 11.1 ಲಕ್ಷ ಕೋಟಿಯಷ್ಟಿತ್ತು ಎಂದು ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟವು (ಎಎಂಎಫ್‌ಐ) ತಿಳಿಸಿದೆ.

ಮಾರ್ಚ್‌ನಿಂದಲೂ ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಬಂಡವಾಳ ಒಳಹರಿವು ಕಂಡುಬರುತ್ತಿದೆ. 2020ರ ಜುಲೈನಿಂದ 2021ರ ಫೆಬ್ರುವರಿಯ ಅವಧಿಯಲ್ಲಿ ನಿರಂತರವಾಗಿ ಬಂಡವಾಳ ಹೊರಹರಿವು ಕಂಡುಬಂದಿತ್ತು.

ADVERTISEMENT

ಸ್ಥಿರವಾದ ಈಕ್ವಿಟಿ ಒಳಹರಿವು ಭಾರತೀಯ ಷೇರು ಮಾರುಕಟ್ಟೆ ಬಗ್ಗೆ ಹೂಡಿಕೆದಾರರಲ್ಲಿನ ಸಕಾರಾತ್ಮಕ ಭಾವನೆಯನ್ನು ಸೂಚಿಸುತ್ತಿದೆ. ವಾಣಿಜ್ಯ ವ್ಯವಹಾರಗಳು ಸಾಂಕ್ರಾಮಿಕ ಸೃಷ್ಟಿಸಿದ ಅಡಚಣೆಗಳಿಂದ ಹೊರಬಂದು ಚೇತರಿಸಿಕೊಳ್ಳುತ್ತಿವೆ. ವ್ಯವಸ್ಥೆಯಲ್ಲಿ ಹೆಚ್ಚಿನ ನಗದು ಲಭ್ಯವಾಗುತ್ತಿದೆ. ಆರ್ಥಿಕತೆಯು ವೇಗವಾಗಿ ಚೇತರಿಕೆ ಕಾಣುವಂತೆ ಮಾಡಲು ಸರ್ಕಾರ ಕೈಗೊಂಡಿರುವ ಉತ್ತೇಜನ ಕ್ರಮಗಳು ನೆರವಾಗುತ್ತಿವೆ ಎಂದು ಹೆಮ್‌ ಸೆಕ್ಯುರಿಟೀಸ್‌ನ ಮುಖ್ಯಸ್ಥ ಮೋಹಿತ್‌ ನಿಗಮ್ ಹೇಳಿದ್ದಾರೆ.

ಈಕ್ವಿಟಿಗಳಲ್ಲಿ ಆಗಿರುವ ಒಟ್ಟಾರೆ ಹೂಡಿಕೆಯಲ್ಲಿ ಎನ್‌ಎಫ್‌ಒಗಳ ಕೊಡುಗೆಯೇ ಶೇಕಡ 50ರಷ್ಟು ಇದೆ ಎಂದು ಮ್ಯೂಚುವಲ್ ಫಂಡ್‌ ತಜ್ಞರು ಹೇಳಿದ್ದಾರೆ. ಎಸ್‌ಐಪಿ ಮೂಲಕ ಆಗಿರುವ ಹೂಡಿಕೆಯು ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹ 29,883 ಕೋಟಿಗೆ ಏರಿಕೆ ಆಗಿದೆ. ಅಲ್ಲದೆ, ಎಸ್‌ಐಪಿಗೆ ತಿಂಗಳ ಕೊಡುಗೆಯು ಏಪ್ರಿಲ್‌ನಲ್ಲಿ ₹ 8,596 ಕೋಟಿ ಇದ್ದಿದ್ದು ಸೆಪ್ಟೆಂಬರ್‌ನಲ್ಲಿ ₹ 19,351 ಕೋಟಿಗೆ ಏರಿದೆ.

ಎಲ್ಲ ಬಗೆಯ ಮ್ಯೂಚುವಲ್‌ ಫಂಡ್‌ಗಳನ್ನು ಪರಿಗಣಿಸಿದರೆ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಆಗಿರುವ ಒಟ್ಟಾರೆ ಹೂಡಿಕೆಯ ಮೊತ್ತವು ₹ 99,974 ಕೋಟಿ ಇದೆ. ಜೂನ್‌ ತ್ರೈಮಾಸಿಕದಲ್ಲಿ ₹ 69,625 ಕೋಟಿಗಳಷ್ಟು ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.