ADVERTISEMENT

ವಾಣಿಜ್ಯ ವಾಹನಕ್ಕೆ ಮಾತ್ರ ಸಬ್ಸಿಡಿ

ವಿದ್ಯುತ್‌ ಚಾಲಿತ ವಾಹನಗಳ ಬಳಕೆಗೆ ಕೇಂದ್ರ ಸರ್ಕಾರದಿಂದ‌ ಉತ್ತೇಜನ

ಪಿಟಿಐ
Published 19 ಜುಲೈ 2019, 17:05 IST
Last Updated 19 ಜುಲೈ 2019, 17:05 IST
   

ನವದೆಹಲಿ: ವಿದ್ಯುತ್‌ ಚಾಲಿತ ವಾಹನಗಳ ಬಳಕೆ ಉತ್ತೇಜಿಸಲು ನೀಡಲಾಗುವ ಸಬ್ಸಿಡಿಯು ವಾಣಿಜ್ಯ ವಾಹನಗಳಿಗೆ ಮಾತ್ರ ಅನ್ವಯವಾಗುತ್ತಿದ್ದು, ವೈಯಕ್ತಿಕ ಬಳಕೆಯ ವಾಹನಗಳಿಗೆ ಅನ್ವಯವಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

‘ಪರಿಸರ ಮಾಲಿನ್ಯ ತಗ್ಗಿಸಲು ಇಂತಹ ವಾಹನಗಳ ಬಳಕೆ ಉತ್ತೇಜಿಸಲಾಗುತ್ತಿದ್ದು, ವಾಣಿಜ್ಯ ವಾಹನಗಳ ಮಾಲೀಕರಿಗೆ ಮಾತ್ರ ಸಬ್ಸಿಡಿ ನೀಡಲಾಗುವುದು’ ಎಂದು ಕೇಂದ್ರದ ಭಾರಿ ಕೈಗಾರಿಕೆ ಮತ್ತು ಕೇಂದ್ರೋದ್ಯಮ ಸಚಿವ ಅರ್ಜುನ್‌ ರಾಂ ಮೇಘ್ವಾಲ್‌ ಹೇಳಿದ್ದಾರೆ. ಶುಕ್ರವಾರ ಇಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

‘ಬೈಕ್‌, ಕಾರ್‌, ಲಾರಿ, ಬಸ್ ಮತ್ತು ಆಟೊರಿಕ್ಷಾಗಳೆಲ್ಲ ವಿದ್ಯುತ್‌ ಚಾಲಿತಗಳಾಗಬೇಕು ಎನ್ನುವುದು ಸರ್ಕಾರದ ಅಪೇಕ್ಷೆಯಾಗಿದೆ. ಪ್ಯಾರಿಸ್‌ ಒಪ್ಪಂದದ ಅನ್ವಯ, ಮಾಲಿನ್ಯ ನಿಯಂತ್ರಣ ತಗ್ಗಿಸಲು ಈ ಬದಲಾವಣೆ ನಡೆಯುವ ಅಗತ್ಯಇದೆ.

ADVERTISEMENT

‘ಹೊಗೆ ಮುಕ್ತ ಪರಿಸರವನ್ನು ಭವಿಷ್ಯದ ತಲೆಮಾರಿಗೆ ಒದಗಿಸಲು ವಿದ್ಯುತ್‌ ಚಾಲಿತ ವಾಹನಗಳ ಬಳಕೆ ಹೆಚ್ಚಿಸುವುದಕ್ಕೆ ಮಹತ್ವ ಇದೆ. ಶುದ್ಧ ವಾತಾವರಣ ಹೊಂದುವುದು ಭವಿಷ್ಯದ ಪೀಳಿಗೆಯ ಹಕ್ಕಾಗಿದೆ. ಅದನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತ
ವಾಗಿದೆ’ ಎಂದು ಮೇಘ್ವಾಲ್‌ ಹೇಳಿದ್ದಾರೆ.

ವಿದ್ಯುತ್‌ ಚಾಲಿತ ವಾಹನಗಳ ತಯಾರಿಕೆ ಮತ್ತು ತ್ವರಿತ ಅಳವಡಿಕೆಯ ₹ 10 ಸಾವಿರ ಕೋಟಿ ಯೋಜನೆಯಡಿ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುವ ವಾಹನಗಳಿಗೆ ಸಬ್ಸಿಡಿ ನೀಡಲು ನಿರ್ಧರಿಸಲಾಗಿದೆ. ದ್ವಿಚಕ್ರ ವಾಹನಗಳ ವಿಷಯದಲ್ಲಿ ಈ ರಿಯಾಯ್ತಿ ಕೊಡುಗೆಯನ್ನು ವೈಯಕ್ತಿಕ ಬಳಕೆಗೂ ವಿಸ್ತರಿಸಲಾಗಿದೆ.

ಸಬ್ಸಿಡಿ ವಿಸ್ತರಣೆಗೆ ಬೇಡಿಕೆ: ವೈಯಕ್ತಿಕ ಬಳಕೆಗೆ ವಿದ್ಯುತ್‌ ಚಾಲಿತ ಕಾರ್‌ ಖರೀದಿಸುವವರಿಗೂ ಸಬ್ಸಿಡಿ ಬೆಂಬಲ ನೀಡಬೇಕು ಎಂದು ವಾಹನ ತಯಾರಕ ಸಂಸ್ಥೆಗಳು ಕೇಂದ್ರ ಸರ್ಕಾರವನ್ನು ಕೇಳಿಕೊಂಡಿವೆ. ಇದರಿಂದ ಪರಿಸರ ಸ್ನೇಹಿ ತಂತ್ರಜ್ಞಾನವು ಜನಪ್ರಿಯವಾಗುವುದರ ಜತೆಗೆ, ಖರೀದಿದಾರರ ಪಾಲಿಗೆ ಬೆಲೆಯೂ ಅಗ್ಗವಾಗಿರಲಿದೆ ಎನ್ನುವುದು ಅವರ ವಾದವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.