ADVERTISEMENT

ರಫ್ತು ಸೂಚ್ಯಂಕ: ಗುಜರಾತ್‌ ಮೊದಲು

ಪಿಟಿಐ
Published 26 ಆಗಸ್ಟ್ 2020, 14:49 IST
Last Updated 26 ಆಗಸ್ಟ್ 2020, 14:49 IST
   

ನವದೆಹಲಿ: ನೀತಿ ಆಯೋಗ ಸಿದ್ಧಪಡಿಸಿರುವ ‘ರಫ್ತು ಸಿದ್ಧತೆ ಸೂಚ್ಯಂಕ 2020’ರಲ್ಲಿ ಗುಜರಾತ್ ಮೊದಲ ಸ್ಥಾನ ಪಡೆದಿದೆ. ಎರಡು ಮತ್ತು ಮೂರನೆಯ ಸ್ಥಾನಗಳಲ್ಲಿ ಕ್ರಮವಾಗಿ ಮಹಾರಾಷ್ಟ್ರ ಮತ್ತು ತಮಿಳುನಾಡು ಇವೆ. ಈ ಸೂಚ್ಯಂಕವನ್ನು ಬುಧವಾರ ಬಿಡುಗಡೆ ಮಾಡಲಾಗಿದೆ.

ಮೊದಲ ಹತ್ತು ಸ್ಥಾನಗಳ ಪೈಕಿ ಆರು ಸ್ಥಾನಗಳು ಕರಾವಳಿಯನ್ನು ಹೊಂದಿರುವ ರಾಜ್ಯಗಳ (ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಒಡಿಶಾ, ಕರ್ನಾಟಕ ಮತ್ತು ಕೇರಳ) ಪಾಲಾಗಿವೆ. ರಫ್ತಿಗೆ ಅಗತ್ಯವಿರುವ ಮೂಲಸೌಕರ್ಯ, ಪೂರಕ ವಾತಾವರಣ ಆಧರಿಸಿ ಈ ರ್‍ಯಾಂಕ್ ನೀಡಲಾಗಿದೆ.

‘ರಫ್ತು ಎಂಬುದು ಆತ್ಮನಿರ್ಭರ ಭಾರತ ಯೋಜನೆಯ ಅವಿಭಾಜ್ಯ ಅಂಗ. ವಿಶ್ವದ ವ್ಯಾಪಾರದಲ್ಲಿ ತನ್ನ ಪಾಲನ್ನು ಹೆಚ್ಚಿಸಿಕೊಳ್ಳಲು ಭಾರತವು ರಫ್ತು ಪ್ರಮಾಣ ಹೆಚ್ಚಿಸಲು ಸದಾ ಯತ್ನಿಸುತ್ತಿರಬೇಕು’ ಎಂದು ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದರು. ‘ಮುಂಬರುವ ವರ್ಷಗಳಲ್ಲಿ ನಾವು ವಿಶ್ವದ ವ್ಯಾಪಾರ ವಹಿವಾಟಿನಲ್ಲಿ ಭಾರತದ ಪಾಲನ್ನು ದುಪ್ಪಟ್ಟು ಮಾಡಲು ಯತ್ನಿಸುತ್ತೇವೆ’ ಎಂದರು.

ADVERTISEMENT

ನೀತಿ ಆಯೋಗವು ಬಿಡುಗಡೆ ಮಾಡಿರುವ ಈ ಸೂಚ್ಯಂಕವು, ರಫ್ತು ವಹಿವಾಟಿಗೆ ಇರುವ ಸವಾಲುಗಳನ್ನು ಹಾಗೂ ಅವಕಾಶಗಳನ್ನು ಗುರುತಿಸುವ ಉದ್ದೇಶ ಹೊಂದಿದೆ. ದೇಶದ ಒಟ್ಟು ರಫ್ತು ವಹಿವಾಟಿನಲ್ಲಿ ಶೇಕಡ 70ರಷ್ಟು ಕೊಡುಗೆ ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳದ್ದು ಎಂಬುದನ್ನು ಈ ವರದಿ ಗುರುತಿಸಿದೆ.

ರಫ್ತಿಗೆ ಅಗತ್ಯವಿರುವ ಬೆಂಬಲ ನೀಡುವ ವಿಚಾರದಲ್ಲಿ ರಾಜ್ಯಗಳು ಹಿಂದುಳಿದಿವೆ ಎಂಬುದನ್ನೂ ಇದು ಬೊಟ್ಟುಮಾಡಿದೆ. 15 ರಾಜ್ಯಗಳು ಮಾತ್ರ ರಫ್ತು ವಹಿವಾಟು ನಡೆಸುವವರಿಗೆ ಆನ್‌ಲೈನ್‌ ಪೋರ್ಟಲ್‌ ಮೂಲಕ ಮಾಹಿತಿ ನೀಡುವ ಕೆಲಸ ಮಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.