ADVERTISEMENT

ಮಂದ ಆರ್ಥಿಕತೆ, ಬೇಡಿಕೆ ಕುಸಿತವು ವಾಹನೋದ್ಯಮಕ್ಕೆ ಸವಾಲು: ಕೈನೆಟಿಕ್‌ ಗ್ರೀನ್‌

ಪಿಟಿಐ
Published 5 ಜುಲೈ 2020, 13:54 IST
Last Updated 5 ಜುಲೈ 2020, 13:54 IST
ವಾಹನ ಉದ್ಯಮ
ವಾಹನ ಉದ್ಯಮ   

ಮುಂಬೈ: ಮಂದಗತಿಯ ಆರ್ಥಿಕ ಬೆಳವಣಿಗೆ ಮತ್ತು ಗ್ರಾಹಕರ ಖರೀದಿ ಸಾಮರ್ಥ್ಯ ತಗ್ಗಿರುವುದು ವಾಹನ ಉದ್ಯಮಕ್ಕೆ ಬಹುದೊಡ್ಡ ಸವಾಲಾಗಿವೆ ಎಂದು ವಿದ್ಯುತ್‌ ಚಾಲಿತ (ಎಲೆಕ್ಟ್ರಿಕ್‌) ವಾಹನಗಳನ್ನು ತಯಾರಿಸುವ ಕೈನೆಟಿಕ್‌ ಗ್ರೀನ್‌ ಕಂಪನಿ ತಿಳಿಸಿದೆ.

ದೀರ್ಘಾವಧಿಯಲ್ಲಿ ವಿದ್ಯುತ್‌ ಚಾಲಿತ ವಾಹನ (ಇವಿ) ವಿಭಾಗಕ್ಕೆ ಉತ್ತಮ ಬೇಡಿಕೆ ಬರಲಿದೆ ಎಂದು ಹೇಳಿರುವ ಕಂಪನಿಯು, ಮುಂದಿನ ಒಂದರಿಂದ ಎರಡು ತ್ರೈಮಾಸಿಕಗಳಿಗೆ ಹೂಡಿಕೆ ಮಾಡುವ ಯೋಜನೆಯನ್ನು ಹಿಂದಕ್ಕೆ ಪಡೆಯುವುದಾಗಿ ತಿಳಿಸಿದೆ.

ಏಪ್ರಿಲ್‌ನಲ್ಲಿ ಒಂದೇ ಒಂದು ವಾಹನವನ್ನೂ ಮಾರಾಟ ಆಗಿಲ್ಲ. ಮೇನಲ್ಲಿ ಶೇ 89ರಷ್ಟು ಕುಸಿತ ಕಂಡಿದೆ. ಜೂನ್‌ನಲ್ಲಿ ತುಸು ಚೇತರಿಸಿಕೊಂಡಿದೆ.

ADVERTISEMENT

ಕೋವಿಡ್‌ ಬಿಕ್ಕಟ್ಟು ಸೃಷ್ಟಿಯಾಗುವುದಕ್ಕೂ ಮೊದಲೇ ಹಿಂದಿನ ಹಣಕಾಸು ವರ್ಷದಲ್ಲಿ ವಾಹನ ಉದ್ಯಮವು ಸಮಸ್ಯೆಗೆ ಸಿಲುಕಿತ್ತು. 2019ರಲ್ಲಿ ಬೆಳವಣಿಗೆಯು ಶೇ 18ರಷ್ಟು ಇಳಿಕೆಯಾಗಿತ್ತು. ಇದೀಗ ಕೋವಿಡ್‌ನಿಂದಾಗಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಲಾಕ್‌ಡೌನ್‌ನಿಂದಾಗಿ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರುವಂತಾಗಿದೆ ಎಂದು ಕಂಪನಿ ವಿವರಿಸಿದೆ.

‘ಲಾಕ್‌ಡೌನ್‌ ಮಿತಿ ಸಡಿಲಿಸುತ್ತಿರುವುದರಿಂದ ಬೇಡಿಕೆಯು ಬಹಳ ನಿಧಾನಗತಿಯಲ್ಲಿ ಹೆಚ್ಚಾಗುತ್ತಿದೆ. ಮೇ ತಿಂಗಳಿಗೆ ಹೋಲಿಸಿದರೆ ಜೂನ್‌ನಲ್ಲಿ ಎಲ್ಲಾ ವಿಭಾಗಗಳಲ್ಲಿಯೂ ತುಸು ಚೇತರಿಕೆ ಕಂಡುಬಂದಿದೆ. 2020–21ರ ಮೂರು ಮತ್ತು ನಾಲ್ಕನೇ ತ್ರೈಮಾಸಿಕಗಳಲ್ಲಿ ಉದ್ಯಮವು ಚೇತರಿಸಿಕೊಳ್ಳುವ ವಿಶ್ವಾಸವಿದೆ. ಹಬ್ಬದ ಸಂದರ್ಭವು ತಯಾರಕರು ಮತ್ತು ಗ್ರಾಹಕರಲ್ಲಿ ಹೊಸ ಉತ್ಸಾಹ ಮೂಡಿಸಲಿದೆ. ಭಾರತವಷ್ಟೇ ಅಲ್ಲದೇ ಜಗತ್ತಿನ ಎಲ್ಲೆಡೆ ಕೋವಿಡ್‌ ನಿಯಂತ್ರಣಕ್ಕೆ ಬರುವ ನಿರೀಕ್ಷೆ ಇದೆ’ ಎಂದು ಕಂಪನಿಯ ಸ್ಥಾಪಕ ಸುಲಜ್ಜಾ ಫಿರೋದಿಯಾ ಮೋಟ್ವಾನಿ ಹೇಳಿದ್ದಾರೆ.

ಗ್ರಾಮೀಣ ಭಾಗದಲ್ಲಿ ಮೋಟರ್‌ಸೈಕಲ್‌, ಟ್ರ್ಯಾಕ್ಟರ್‌ ಮತ್ತು ಯುಟಿಲಿಟಿ ವಾಹನಗಳ ಮಾರಾಟ ಹೆಚ್ಚಾಗಲಿದೆ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.