ADVERTISEMENT

ಜಿಯೊದ ಶೇ 10ರಷ್ಟು ಪಾಲು ಫೇಸ್‌ಬುಕ್‌ ವಶಕ್ಕೆ

₹ 43,574 ಕೋಟಿ ಹೂಡಿಕೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 20:00 IST
Last Updated 22 ಏಪ್ರಿಲ್ 2020, 20:00 IST
ಮಾರ್ಕ್‌ ಜುಕರ್‌ಬರ್ಗ್‌
ಮಾರ್ಕ್‌ ಜುಕರ್‌ಬರ್ಗ್‌   
""

ಮುಂಬೈ: ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ನ (‘ಆರ್‌ಐಎಲ್‌’) ಜಿಯೊ ಪ್ಲಾಟ್‌ಫಾರ್ಮ್‌ನಲ್ಲಿ ಅಮೆರಿಕದ ದೈತ್ಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ₹ 43,574 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಮಾಡುವುದಾಗಿ ಪ್ರಕಟಿಸಿದೆ.

ಈ ಹೂಡಿಕೆ ಮೂಲಕ ಜಿಯೊ ಪ್ಲಾಟ್‌ಫಾರ್ಮ್‌ನಲ್ಲಿನ ಶೇ 9.99 ರಷ್ಟು ಪಾಲು ಬಂಡವಾಳ ಫೇಸ್‌ಬುಕ್‌ ಪಾಲಾಗಲಿದೆ. ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಖರೀದಿಸಿದ ನಂತರದ ಅತಿದೊಡ್ಡ ಬಂಡವಾಳ ಹೂಡಿಕೆ ಇದಾಗಿದೆ. ರಿಲಯನ್ಸ್‌ನ ಎಲ್ಲ ಡಿಜಿಟಲ್‌ ಸೇವೆಗಳನ್ನು ಒಂದೇ ವೇದಿಕೆಯಡಿ ತರಲು 2019ರಲ್ಲಿ ‘ಜಿಯೊ ಪ್ಲಾಟ್‌ಫಾರ್ಮ್‌‘ ಆರಂಭಿಸಲಾಗಿತ್ತು.

ಈ ಹೂಡಿಕೆಯಿಂದ ‘ಆರ್‌ಐಎಲ್‌’ ತನ್ನ ಸಾಲದ ಹೊರೆ ತಗ್ಗಿಸಲು ಮತ್ತು ವಾಟ್ಸ್‌ಆ್ಯಪ್‌ ಬಳಸಿಕೊಂಡು ಭಾರತದ ಇ–ಕಾಮರ್ಸ್‌ ದೈತ್ಯ ವಹಿವಾಟು ಆರಂಭಿಸಿ ಅಮೆಜಾನ್‌ ಮತ್ತು ವಾಲ್‌ಮಾರ್ಟ್‌ಗೆ ಸಡ್ಡು ಹೊಡೆಯಲು ನೆರವಾಗಲಿದೆ.

ADVERTISEMENT

ಭಾರತದ ತಂತ್ರಜ್ಞಾನ ಕ್ಷೇತ್ರದಲ್ಲಿನ ಅತಿದೊಡ್ಡ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆ ಇದಾಗಿದೆ. ಅಮೆರಿಕದ ದೈತ್ಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ಭಾರತದಲ್ಲಿನ ವಹಿವಾಟು ವಿಸ್ತರಣೆಗೂ ಇದೊಂದು ದೊಡ್ಡ ಹೆಜ್ಜೆಯಾಗಿದೆ.

ಜಿಯೊ ಪ್ಲಾಟ್‌ಫಾರ್ಮ್‌ನ ನಿರ್ದೇಶಕ ಮಂಡಳಿಯಲ್ಲಿ ಫೇಸ್‌ಬುಕ್‌ನ ಪ್ರತಿನಿಧಿ ಮತ್ತು ಮುಕೇಶ್‌ ಅವರ ಅವಳಿ ಮಕ್ಕಳಾದ ಇಷಾ ಮತ್ತು ಆಕಾಶ್‌ ಕೂಡ ಇರಲಿದ್ದಾರೆ. ಈ ಒಪ್ಪಂದಕ್ಕೆ ಭಾರತದ ಸ್ಪರ್ಧಾತ್ಮಕ ಆಯೋಗದ (ಸಿಸಿಐ) ಅನುಮತಿ ದೊರೆಯಬೇಕಾಗಿದೆ.

ದಿನಸಿ ಪೂರೈಕೆ ಸೇವೆ: ‘ರಿಲಯನ್ಸ್‌ನ ಇ–ಕಾಮರ್ಸ್‌ ಅಂಗಸಂಸ್ಥೆಯಾಗಿರುವ ಜಿಯೊಮಾರ್ಟ್‌ ಮತ್ತು ಫೇಸ್‌ಬುಕ್‌ ಒಡೆತನದ ವಾಟ್ಸ್‌ಆ್ಯಪ್‌ ಜಂಟಿಯಾಗಿ 3 ಕೋಟಿ ಕಿರಾಣಿ ಮಳಿಗೆಗಳ ಮೂಲಕ ಗ್ರಾಹಕರಿಗೆ ತ್ವರಿತವಾಗಿ ದಿನಸಿ ಪೂರೈಸುವ ಸೇವೆಗೆ ಚಾಲನೆ ನೀಡಲಿವೆ’ ಎಂದು ಮುಕೇಶ್‌ ಅಂಬಾನಿ ತಿಳಿಸಿದ್ದಾರೆ.

‘ಗ್ರಾಹಕರು ತಮ್ಮ ದಿನಬಳಕೆಯ ಸರಕುಗಳನ್ನು ಮನೆ ಸಮೀಪದ ಅಂಗಡಿಗಳಿಂದ ಅತ್ಯಲ್ಪ ಅವಧಿಯಲ್ಲಿ ಮನೆಗೆ ತರಿಸಿಕೊಳ್ಳಬಹುದು. ಡಿಜಿಟಲ್‌ ತಂತ್ರಜ್ಞಾನ ನೆರವಿನಿಂದ ಕಿರಾಣಿ ಅಂಗಡಿ ಮಾಲೀಕರು ತಮ್ಮ ವಹಿವಾಟು ವಿಸ್ತರಣೆ ಮಾಡುವುದರ ಜತೆಗೆ ಹೊಸ ಉದ್ಯೋಗ ಅವಕಾಶಗಳನ್ನೂ ಸೃಷ್ಟಿಸಲಿದ್ದಾರೆ’ ಎಂದು ಹೇಳಿದ್ದಾರೆ.

2016ರಲ್ಲಿ ಕಾರ್ಯಾರಂಭ ಮಾಡಿರುವ ಮೊಬೈಲ್‌ ಸೇವಾ ಸಂಸ್ಥೆ ಜಿಯೊ, ಅಗ್ಗದ ದರದ ಕರೆ ಮತ್ತು ಡೇಟಾ ಒದಗಿಸಿ ಗ್ರಾಹಕರ ಮನ ಗೆದ್ದಿರುವ ಜಿಯೊ, ಪ್ರತಿಸ್ಪರ್ಧಿ ಕಂಪನಿಗಳ ಅಸ್ತಿತ್ವಕ್ಕೇನೆ ಬೆದರಿಕೆ ಒಡ್ಡಿದೆ.

‘ಆರ್‌ಐಎಲ್‌’ಗೆ ಸೇರಿದ ಕೆಲ ವಹಿವಾಟಿನ ಪಾಲು ಬಂಡವಾಳವನ್ನು ಮಾರಾಟ ಮಾಡಿ ಕಂಪನಿಯನ್ನು 2021ರ ವೇಳೆ ಸಾಲದಿಂದ ಮುಕ್ತಗೊಳಿಸಲಾಗುವುದು ಎಂದು ಮುಕೇಶ್‌ ಹಿಂದಿನ ವರ್ಷವೇ ಪ್ರಕಟಿಸಿದ್ದರು.

ಮುಕೇಶ್ ಅಂಬಾನಿ

ಫೇಸ್‌ಬುಕ್‌ ಹೂಡಿಕೆಗೆ ಮುಕೇಶ್ ಆಂಬಾನಿ ಶ್ಲಾಘನೆ

‘ಜಿಯೊದ ಜಾಗತಿಕ ಗುಣಮಟ್ಟದ ಡಿಜಿಟಲ್‌ ಸಂಪರ್ಕ ಸೇವೆ ಮತ್ತು ಭಾರತೀಯರ ಜತೆ ಫೇಸ್‌ಬುಕ್‌ ಹೊಂದಿರುವ ಭಾವನಾತ್ಮಕ ಸಂಬಂಧದ ಈ ಜಂಟಿ ಪ್ರಯತ್ನವು ಪ್ರತಿಯೊಬ್ಬಭಾರತೀಯನಿಗೆ ಹೊಸ ಸೇವೆಗಳನ್ನು ಒದಗಿಸಲು ನೆರವಾಗಲಿದೆ’ ಎಂದು ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರ ಬಣ್ಣಿಸಿದ್ದಾರೆ.

ಜಿಯೊ ಪ್ಲಾಟ್‌ಫಾರ್ಮ್‌: ‘ಆರ್‌ಐಎಲ್‌’ನ ಸಂಪೂರ್ಣ ಒಡೆತನಕ್ಕೆ ಒಳಪಟ್ಟಿರುವ ಜಿಯೊ ಪ್ಲಾಟ್‌ಫಾರ್ಮ್ಸ್‌ನಡಿ, ಕಂಪನಿಯ ಎಲ್ಲ ಡಿಜಿಟಲ್‌ ಸೇವೆಗಳನ್ನು ಒದಗಿಸಲಾಗುತ್ತಿದೆ.

ಮೊಬೈಲ್‌, ಬ್ರಾಡ್‌ಬ್ಯಾಂಡ್‌ ಒಳಗೊಂಡ ಜಿಯೊ ಡಿಜಿಟಲ್‌ ಸೇವೆ, ಆ್ಯಪ್‌ಗಳು, ಕೃತಕ ಬುದ್ಧಿಮತ್ತೆ, ಬಿಗ್‌ ಡೇಟಾ, ಪರಸ್ಪರ ಸಂವಹನ ಸಾಧಿಸುವ ಡಿಜಿಟಲ್‌ ಸಾಧನಗಳು (ಐಒಟಿ) ಇದರ ವ್ಯಾಪ್ತಿಯಲ್ಲಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.