ADVERTISEMENT

ಏಷ್ಯಾದ ಸಿಗರೇಟು ಜನ್ಮಸ್ಥಳವೀಗ ನಕಲಿ ಸಿಗರೇಟು ಕೇಂದ್ರ

ಪಿಟಿಐ
Published 25 ಜನವರಿ 2026, 15:55 IST
Last Updated 25 ಜನವರಿ 2026, 15:55 IST
   

ಭಾಗಲ್ಪುರ: ಏಷ್ಯಾ ಖಂಡದಲ್ಲಿ ಮೊದಲ ಬಾರಿಗೆ ಸಿಗರೇಟು ತಯಾರಾದ ಪ್ರದೇಶವೆಂದು ಹೆಸರು ಪಡೆದಿರುವ ಬಿಹಾರದ ಮುಂಗೇರ್‌, ಇಂದು ನಕಲಿ ಸಿಗರೇಟುಗಳ ತಯಾರಿಕಾ ಕೇಂದ್ರವೂ ಆಗಿದೆ.

ಕಳೆದ ಒಂದು ದಶಕದಿಂದ ಸಿಗರೇಟು ಬೆಲೆಯಲ್ಲಿ ಏರಿಕೆ ಆಗಿದೆ. ಇದು ಅಕ್ರಮ ಚಟುವಟಿಕೆ ಹೆಚ್ಚಳಕ್ಕೆ ಕಾರಣವಾಗಿದ್ದು, ಮುಂಗೇರ್‌ ಪ್ರದೇಶವು ನಕಲಿ ಸಿಗರೇಟುಗಳ ತಯಾರಿಕೆ ಮತ್ತು ವಿತರಣಾ ಕೇಂದ್ರವಾಗಿದೆ.

ಬಿಹಾರ ಪೊಲೀಸರು, ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಸೇರಿದಂತೆ ಸರ್ಕಾರದ ಹಲವು ಸಂಸ್ಥೆಗಳು ಬಿಹಾರ ಮತ್ತು ನೆರೆಯ ರಾಜ್ಯಗಳಾದ ಜಾರ್ಖಂಡ್‌, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಛತ್ತೀಸಗಢದಲ್ಲಿ ದಾಳಿ ನಡೆಸಿ, ಖಾಲಿ ಸಿಗರೇಟು ಪ್ಯಾಕ್, ನಕಲಿ ಸಿಗರೇಟುಗಳನ್ನು ವಶಕ್ಕೆ ಪಡೆದಿವೆ. ಅಲ್ಲದೆ, ಈ ಜಾಲವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿವೆ.

ADVERTISEMENT

ಕಳೆದ ತಿಂಗಳು ಸ್ಥಳೀಯ ಕಾರ್ಖಾನೆಯ ಪ್ರದೇಶದ ಬಳಿ ₹50 ಲಕ್ಷ ಮೌಲ್ಯದ 4 ಲಕ್ಷ ನಕಲಿ ಸಿಗರೇಟು ಮತ್ತು ₹85 ಲಕ್ಷ ನಗದನ್ನು ಪೊಲೀಸರು ವಶಪಡಿಸಿಕೊಂಡ ಬಳಿಕ, ಸಮಸ್ಯೆಯ ಸ್ವರೂಪವು ಅರಿವಾಗಿದೆ. ಈ ನಕಲಿ ಸಿಗರೇಟು ವ್ಯಾಪಾರವು ಸರ್ಕಾರದ ಬೊಕ್ಕಸಕ್ಕೆ ವರಮಾನವನ್ನು ಕಡಿಮೆ ಮಾಡುವುದಲ್ಲದೆ, ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

‘ನಕಲಿ ಸಿಗರೇಟಿನ ಹಾವಳಿ ಈ ಪ್ರದೇಶವನ್ನು ಕಾಡುತ್ತಿರುವ ಗಂಭೀರ ಸಮಸ್ಯೆಯಾಗಿದ್ದು, ಇದನ್ನು ನಿಗ್ರಹಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ನಕಲಿ ಸಿಗರೇಟ್ ವ್ಯಾಪಾರವನ್ನು ನಿಯಂತ್ರಿಸಲು ಶೋಧ ಮತ್ತು ವಶಪಡಿಸಿಕೊಳ್ಳುವ ಕಾರ್ಯಾಚರಣೆಗಳನ್ನು ನಡೆಸಿದ್ದೇವೆ. ಇತ್ತೀಚೆಗೆ ₹50 ಲಕ್ಷ ಮೌಲ್ಯದ ನಕಲಿ ಸಿಗರೇಟುಗಳನ್ನು ವಶಪಡಿಸಿಕೊಂಡ ಬಳಿಕ, ಅಂತಹ ಯಾವುದೇ ಘಟನೆಗಳು ವರದಿಯಾಗಿಲ್ಲ’ ಎಂದು ಮುಂಗೇರ್‌ನ ಪೊಲೀಸ್ ವರಿಷ್ಠಾಧಿಕಾರಿ ಸೈಯದ್ ಇಮ್ರಾನ್ ಮಸೂದ್ ತಿಳಿಸಿದ್ದಾರೆ.

ಜನಪ್ರಿಯ ಬ್ರ್ಯಾಂಡ್‌ಗಳ ಖಾಲಿ ಸಿಗರೇಟು ಪ್ಯಾಕೆಟ್‌ಗಳನ್ನು ಈ ಏಜೆಂಟ್‌ಗಳಿಗೆ ನೀಡಿದರೆ ಪ್ರತಿ ಪ್ಯಾಕೆಟ್‌ಗೆ ₹1ರಿಂದ ₹1.5 ದೊರೆಯುತ್ತದೆ. ಇದರಲ್ಲಿ ನಕಲಿ ಸಿಗರೇಟುಗಳನ್ನು ತುಂಬಿ ಮಾರಾಟ ಮಾಡಲಾಗುತ್ತದೆ ಎಂದು ಸ್ಥಳೀಯ ಸಿಗರೇಟು ಮಾರಾಟಗಾರರೊಬ್ಬರು ತಿಳಿಸಿದ್ದಾರೆ.

ಡಿಆರ್‌ಐ ಮತ್ತು ಬಿಹಾರ ಪೊಲೀಸರು ಸೇರಿದಂತೆ ವಿವಿಧ ಸಂಸ್ಥೆಗಳು 2024ರಲ್ಲಿ ₹7.5 ಕೋಟಿ ಮತ್ತು 2025ರಲ್ಲಿ ₹3.7 ಕೋಟಿ ಮೌಲ್ಯದ ನಕಲಿ ಸಿಗರೇಟ್‌ಗಳನ್ನು ವಶಪಡಿಸಿಕೊಂಡಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.