ADVERTISEMENT

ಕಾಳುಮೆಣಸು ಧಾರಣೆ ಭಾರಿ ಕುಸಿತ: ಬೆಳೆಗಾರರು ಕಂಗಾಲು

ಕೇಂದ್ರ ಸರ್ಕಾರದ ವಿರುದ್ಧ ಬೆಳೆಗಾರರ ಅಸಹನೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 14:29 IST
Last Updated 4 ಜುಲೈ 2018, 14:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಾಳೆಹೊನ್ನೂರು: ಕಾಫಿ ಬೆಳೆಗಾರರ ಆಪದ್ಬಾಂಧವ ಬೆಳೆ ಎಂದೇ ಪರಿಗಣಿಸಿರುವ ಕಾಳುಮೆಣಸಿನ ಧಾರಣೆಯು ಮಾರುಕಟ್ಟೆಯಲ್ಲಿ ಶೇ 50ಕ್ಕಿಂತಲೂ ಅಧಿಕ ಕುಸಿತ ಕಂಡಿದೆ. ಇದರಿಂದಾಗಿ ಬೆಳೆಗಾರರು ಕಂಗಾಲಾಗಿದ್ದಾರೆ.

ಕೇಂದ್ರ ಸರ್ಕಾರದ ವೈಫಲ್ಯವೇ ಬೆಲೆ ಕುಸಿಯಲು ಪ್ರಮುಖ ಕಾರಣ ಎಂದು ಬೆಳೆಗಾರರು ದೂರುತ್ತಿದ್ದಾರೆ.

ವರ್ಷದ ಹಿಂದೆ ಪ್ರತಿ ಕೆ.ಜಿಗೆ ₹600 ಆಸುಪಾಸಿನಲ್ಲಿದ್ದ ಧಾರಣೆ ಇದೀಗ ₹ 300ಗೆ ಕುಸಿದಿದೆ. ಅದನ್ನೂ ಕೂಡ ಮಾರುಕಟ್ಟೆಯಲ್ಲಿ ಕೇಳುವವರಿಲ್ಲ. ಕಾಫಿ ಬೆಳೆ ಕುಸಿದಾಗ ಬಹುತೇಕ ಬೆಳೆಗಾರರು ಕಾಳುಮೆಣಸನ್ನೇ ನೆಚ್ಚಿಕೊಂಡಿದ್ದರು. ಕಾಫಿ ತೋಟಗಳ ನಿರ್ವಹಣೆಯಲ್ಲಿ ಇದು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಈ ಬಾರಿ ಕಾಳುಮೆಣಸು ಉತ್ತಮ ಇಳುವರಿ ಹೊಂದಿದ್ದು, ಬೆಳೆಗಾರರು ಕೆ.ಜಿ.ಗೆ ಕನಿಷ್ಠ ₹ 500 ಬೆಲೆ ನಿರೀಕ್ಷಿಸಿದ್ದರು.

ADVERTISEMENT

ಕಳೆದ ವರ್ಷ ಮಾರುಕಟ್ಟೆಯಲ್ಲಿ ಧಾರಣೆ ಕುಸಿತಗೊಂಡಿದ್ದ ವೇಳೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಅಮದು ಶುಲ್ಕವನ್ನು ಏರಿಸಿತ್ತು. ಹೀಗಾಗಿ ಮಾರುಕಟ್ಟೆಯಲ್ಲಿ ಆ ವೇಳೆ ಒಂದೇ ಬಾರಿ ಕೆ.ಜಿಗೆ ₹ 500 ಮುಟ್ಟಿದ್ದ ಧಾರಣೆ ಇದೀಗ ದಿಢೀರ್ ಆಗಿ ₹ 300ಕ್ಕೆ ಕುಸಿದಿದೆ. ಇದು ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳ ಆರ್ಥಿಕ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಬಹುತೇಕ ವ್ಯಾಪಾರಿಗಳು ವ್ಯಾಪಾರವನ್ನೇ ನಿಲ್ಲಿಸಿದ್ದಾರೆ.

ವಿಯೆಟ್ನಾಂನಲ್ಲಿ ಪ್ರತಿ ಕೆ.ಜಿಗೆ ₹ 180ರ ಆಸುಪಾಸಿನಲ್ಲಿ ದೊರೆಯುತ್ತಿದೆ. ಅದು ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸುತ್ತಿರುವುದರಿಂದ ಮಾರುಕಟ್ಟೆ ಕುಸಿಯಲು ಕಾರಣ ಎನ್ನಲಾಗುತ್ತಿದೆ.

ಆಮದುದಾರರು ವಿದೇಶಗಳಲ್ಲಿ ಕಡಿಮೆ ಬೆಲೆಗೆ ದೊರೆಯುವ ಸರಕನ್ನು ತರಿಸಿಕೊಂಡು ಸ್ಥಳೀಯ ಮಾರುಕಟ್ಟೆಯಲ್ಲಿ ಅಗ್ಗದ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ದರವು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ವ್ಯಾಪಾರದಲ್ಲಿ ನಷ್ಟ ಉಂಟಾಗಿ ಕಳಸದ ವ್ಯಾಪಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಎಪಿಎಂಸಿ ಶುಲ್ಕಕ್ಕೆ ವಿರೋಧ: ರಾಜ್ಯದಲ್ಲಿ ಜಿಎಸ್‌ಟಿ ಜತೆಗೆ ಶೇ 1.5ರಷ್ಟು ತೆರಿಗೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವಿಧಿಸುತ್ತಿರುವುದು ಉತ್ತರ ಭಾರತ ಸೇರಿದಂತೆ ಬೇರೆ ರಾಜ್ಯಗಳ ವ್ಯಾಪಾರಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

‘ಕಾಳುಮೆಣಸು ಖರೀದಿಸುವ ಬೇರೆ ರಾಜ್ಯಗಳ ವ್ಯಾಪಾರಿಗಳು ಇದೀಗ ಕರ್ನಾಟಕ ಬಿಟ್ಟು ಕೇರಳಕ್ಕೆ ತೆರಳುತ್ತಿದ್ದಾರೆ. ಟನ್‌ವೊಂದಕ್ಕೆ ಹಾಲಿ ಧಾರಣೆಯಲ್ಲಿ ₹4,500 ಉಳಿತಾಯವಾಗುತ್ತಿದೆ. ಇದೂ ಕೂಡ ಧಾರಣೆ ಕಡಿಮೆಯಾಗಿ ಬೇಡಿಕೆ ಕುಸಿಯಲು ಕಾರಣ’ ಎನ್ನುತ್ತಾರೆ ಬಾಳೆಹೊನ್ನೂರಿನ ಕಾಳುಮೆಣಸಿನ ವ್ಯಾಪಾರಿ ನಯಾಜ್.

ಬೆಲೆ ಕುಸಿತ ಕುರಿತು ಪ್ರತಿಕ್ರಿಯೆ ಪಡೆಯಲು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಅವರನ್ನು ಸಂಪರ್ಕಿಸುವ ಪ್ರಯತ್ನ ಫಲ ನೀಡಿಲ್ಲ.

‘ರಾಜ್ಯದಲ್ಲಿ ಎಪಿಎಂಸಿ ತೆರಿಗೆ ರದ್ದುಪಡಿಸಬೇಕು, ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಕನಿಷ್ಠ ₹500 ಬೆಂಬಲ ಬೆಲೆ ಘೋಷಿಸುವ ಮೂಲಕ ರೈತರ ನೆರವಿಗೆ ಧಾವಿಸಬೇಕು’ ಎಂದು ಕೊಪ್ಪ ತಾಲ್ಲೂಕು ಹೇರೂರಿನ ಪ್ರಗತಿಪರ ರೈತ ಡಾ.ಕೃಷ್ಣಾನಂದ ಆಗ್ರಹಿಸಿದ್ದಾರೆ.

– ಸತೀಶ್‌ ಜೈನ್‌, ಬಾಳೆಹೊನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.