ADVERTISEMENT

ಎಫ್ಐಐ ಹೊರಹರಿವು ಅಬಾಧಿತ

ಹಣದುಬ್ಬರ ಏರಿಕೆ, ಅಮೆರಿಕದಿಂದ ಬಡ್ಡಿದರ ಹೆಚ್ಚಳದ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 7 ಜನವರಿ 2023, 19:13 IST
Last Updated 7 ಜನವರಿ 2023, 19:13 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ದೇಶದ ಷೇರುಪೇಟೆಗಳಿಂದ ವಿದೇಶಿ ಸಾಂಸ್ಥಿಕ ಬಂಡವಾಳ (ಎಫ್‌ಐಐ) ಹೊರಹರಿವು 2023ರಲ್ಲಿಯೂ ಮುಂದುವರಿದಿದೆ. ಜನವರಿ 6ಕ್ಕೆ ಕೊನೆಗೊಂಡ ವಾರದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹7,813 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಎಫ್‌ಐಐ ಹೊರಹರಿವಿಗೆ ಹಲವು ಅಂಶಗಳು ಕಾರಣವಾಗಿವೆ. ಜಾಗತಿಕ ಆರ್ಥಿಕ ಹಿಂಜರಿತದ ಭೀತಿ, ಹಣದುಬ್ಬರ ಏರಿಕೆ, ಬಡ್ಡಿದರ ಹೆಚ್ಚಳದಂತಹ ಅಂಶಗಳು ಪ್ರತಿಕೂಲ ಪರಿಣಾಮ ಬೀರುತ್ತಿವೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

‘ವಿದೇಶಿ ಹೂಡಿಕೆದಾರರು ಇದೇ ರೀತಿಯಲ್ಲಿ ಷೇರುಗಳನ್ನು ಮಾರಾಟ ಮಾಡುವುದನ್ನು ಮುಂದುವರಿಸಿದರೆ, ದೇಶಿ ಹೂಡಿಕೆದಾರರಿಗೆ ಷೇರುಗಳನ್ನು ಖರೀದಿಸಲು ಅವಕಾಶಗಳು ತೆರೆದುಕೊಳ್ಳಲಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬ್ಯಾಂಕಿಂಗ್‌ನಂತಹ ಲಾಭ ತಂದುಕೊಡುವ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಕಳೆದ ವರ್ಷವೂ ಅವರು ಬ್ಯಾಂಕ್‌ ಷೇರುಗಳನ್ನು ಮಾರಾಟ ಮಾಡಿದ್ದರಿಂದಾಗಿ ದೇಶಿ ಹೂಡಿಕೆದಾರರಿಗೆ ಷೇರುಗಳನ್ನು ಖರೀದಿಸಲು ಅವಕಾಶ ಲಭ್ಯವಾಗಿತ್ತು ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ಪ್ರಜಾವಾಣಿಗೆ ತಿಳಿಸಿದರು.

ADVERTISEMENT

‘ವಿದೇಶಿ ಹೂಡಿಕೆದಾರರು 2022ರ ಡಿಸೆಂಬರ್‌ನಲ್ಲಿ ಬಂಡವಾಳ ಸರಕುಗಳು, ಎಫ್‌ಎಂಸಿಜಿ ಮತ್ತು ಹಣಕಾಸು ಸೇವೆಗಳ ವಲಯದ ಷೇರುಗಳನ್ನು ಖರೀದಿಸಿದ್ದಾರೆ. ಆದರೆ, ಐ.ಟಿ. ಕಂಪನಿಗಳ ಷೇರುಗಳನ್ನು ಹೆಚ್ಚಾಗಿ ಮಾರಾಟ ಮಾಡಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

2022ರಲ್ಲಿ ಡಿಸೆಂಬರ್ 29ರವರೆಗಿನ ವಹಿವಾಟಿನಲ್ಲಿ ಎಫ್‌ಐಐ ₹ 1.46 ಲಕ್ಷ ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ದೇಶಿ ಹೂಡಿಕೆ ಬಲ: ದೇಶಿ ಸಾಂಸ್ಥಿಕ ಹೂಡಿಕೆದಾರರ (ಡಿಐಐ) ಸಕ್ರಿಯ ಭಾಗವಹಿಸುವಿಕೆಯು 2023ರಲ್ಲಿಯೂ ಮುಂದುವರಿದಿದೆ. ಹೂಡಿಕೆದಾರರು ಜನವರಿ 6ಕ್ಕೆ ಕೊನೆಗೊಂಡ ವಾರದಲ್ಲಿ ₹2,700 ಕೋಟಿಗೂ ಹೆಚ್ಚಿನ ಮೊತ್ತದ ಷೇರುಗಳನ್ನು ಖರೀದಿಸಿದ್ದಾರೆ.

ದೇಶಿ ಹೂಡಿಕೆದಾರರು 2022ರಲ್ಲಿ ₹ 2.51 ಲಕ್ಷ ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.