ADVERTISEMENT

ರಾಜಿ ತೆರಿಗೆ | ಅರ್ಹರ ಗುರುತಿಸಿ: ಸಿಎಜಿ

ಪಿಟಿಐ
Published 19 ಆಗಸ್ಟ್ 2024, 15:28 IST
Last Updated 19 ಆಗಸ್ಟ್ 2024, 15:28 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಸಣ್ಣ ವರ್ತಕರಿಗೆ ನೆರವು ಕಲ್ಪಿಸಲು ಸರಕು ಮತ್ತು ಸೇವಾ ತೆರಿಗೆಯಡಿ ಪರಿಚಯಿಸಿರುವ ರಾಜಿ ತೆರಿಗೆ ಪದ್ಧತಿ (ಕಂಪೋಸಿಷನ್ ಸ್ಕೀಮ್‌) ವ್ಯಾಪ್ತಿಗೆ ಬರುವ ಅರ್ಹ ತೆರಿಗೆದಾರರನ್ನು ಕೇಂದ್ರ ಹಣಕಾಸು ಸಚಿವಾಲಯವು ಗುರುತಿಸಬೇಕಿದೆ ಎಂದು ಮಹಾ ಲೆಕ್ಕಪರಿಶೋಧಕ ಮತ್ತು ಮಹಾಲೇಖಪಾಲರ (ಸಿಎಜಿ) ವರದಿ ತಿಳಿಸಿದೆ.

₹1.50 ಕೋಟಿವರೆಗಿನ ವಾರ್ಷಿಕ ವಹಿವಾಟು ನಡೆಸುವ ತೆರಿಗೆದಾರರಿಗೆ ಜಿಎಸ್‌ಟಿ ಪಾವತಿಗೆ ಪರ್ಯಾಯವಾಗಿ ಈ ಸೌಲಭ್ಯ ಕಲ್ಪಿಸಲಾಗಿದೆ. ಕೆಲವು ರಾಜ್ಯಗಳಲ್ಲಿ ಈ ವಹಿವಾಟಿನ ಮೊತ್ತವನ್ನು ₹75 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ADVERTISEMENT

ಈ ಪದ್ಧತಿ ಆಯ್ಕೆ ಮಾಡಿಕೊಳ್ಳುವ ವರ್ತಕರಿಗೆ ಜಿಎಸ್‌ಟಿ ಅಡಿ ನಿಗದಿಪಡಿಸಿರುವ ಸಾಮಾನ್ಯ ತೆರಿಗೆ ದರಗಳಿಗೆ ಬದಲಾಗಿ, ಶೇ 1ರಿಂದ ಶೇ 5ರ ವರೆಗೆ ತೆರಿಗೆ ಪಾವತಿಗೆ ಅವಕಾಶ ಸಿಗಲಿದೆ.  

‘ಸಚಿವಾಲಯವು ಇಂತಹ ತೆರಿಗೆದಾರರ ವಹಿವಾಟಿನ ಮೌಲ್ಯ ಪರಿಶೀಲಿಸುವ ಮೂಲಕ ತೆರಿಗೆ ವಂಚನೆಯನ್ನು ಪತ್ತೆ ಹಚ್ಚಬೇಕಿದೆ’ ಎಂದು ಇತ್ತೀಚೆಗೆ ಸಂಸತ್‌ನಲ್ಲಿ ಮಂಡಿಸಿರುವ ಸಿಎಜಿ ವರದಿ ತಿಳಿಸಿದೆ. 

2019–20ರಿಂದ 2021–22ರ ವರೆಗೆ 8.66 ಲಕ್ಷ ತೆರಿಗೆದಾರರನ್ನು ರಾಜಿ ತೆರಿಗೆ ಪದ್ಧತಿಯಡಿ ಗುರುತಿಸಲಾಗಿದೆ. ಆದರೆ, ಈ ಪದ್ಧತಿಯಡಿ ನಿಗದಿಪಡಿಸಿರುವ ವಹಿವಾಟಿನ ಮೊತ್ತ ಮೀರಿದ ತೆರಿಗೆದಾರರು ಇದ್ದಾರೆ. ಅಂತಹವರನ್ನೂ ಪತ್ತೆ ಹಚ್ಚಬೇಕಿದೆ ಎಂದು ಸೂಚಿಸಿದೆ.

ವರ್ತಕರು ಸಲ್ಲಿಸುವ ಜಿಎಸ್‌ಟಿಆರ್‌–4ಎ, ಜಿಎಸ್‌ಟಿಆರ್‌–7 ನಮೂನೆಯ ಆಡಿಟ್‌ ವೇಳೆ ಇವರನ್ನು ಗುರುತಿಸಬೇಕು. ಐ.ಟಿ ರಿಟರ್ನ್ಸ್‌ ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವಾಹನ್‌ ಜಾಲತಾಣದಲ್ಲಿ ನೋಂದಣಿಯಾಗುವ ವಿವರ ಪರಿಶೀಲಿಸಿಯೂ ಪತ್ತೆ ಹಚ್ಚಬಹುದಾಗಿದೆ ಎಂದು ನಿರ್ದೇಶನ ನೀಡಿದೆ.

ಕೆಲವು ತೆರಿಗೆದಾರರು ಜಿಎಸ್‌ಟಿ ನಿಯಮಾವಳಿ ಅನ್ವಯ ನಿಗದಿಪಡಿಸಿರುವ ಅರ್ಹತಾ ಮಾನದಂಡ ಪೂರೈಸದಿದ್ದರೂ ಈ ಪದ್ಧತಿಯಡಿ ಪ್ರಯೋಜನ ಪಡೆಯುತ್ತಿದ್ದಾರೆ. ಅಂತಹ ತೆರಿಗೆದಾರರನ್ನು ಪತ್ತೆ ಹಚ್ಚಲು ಹಣಕಾಸು ಸಚಿವಾಲಯವು ಹೊಸ ವ್ಯವಸ್ಥೆಯನ್ನು ರೂಪಿಸಬೇಕಿದೆ. ಈ ಪದ್ಧತಿಯನ್ನು ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಕ್ರಮಕೈಗೊಳ್ಳಬೇಕಿದೆ ಎಂದು ಸೂಚಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.