ADVERTISEMENT

ನಿಶ್ಚಿತ ಠೇವಣಿಗೆ ಶೇ 8ರಷ್ಟು ಬಡ್ಡಿ

ಪಿಟಿಐ
Published 28 ಫೆಬ್ರುವರಿ 2023, 16:05 IST
Last Updated 28 ಫೆಬ್ರುವರಿ 2023, 16:05 IST
   

ಮುಂಬೈ: ಠೇವಣಿ ಸಂಗ್ರಹ ಹೆಚ್ಚಿಸುವ ಉದ್ದೇಶದಿಂದ ಬ್ಯಾಂಕ್‌ಗಳು ಹಣದುಬ್ಬರದ ಪ್ರಮಾಣಕ್ಕಿಂತ ಹೆಚ್ಚಿನ ಬಡ್ಡಿಯನ್ನು ಠೇವಣಿಗಳಿಗೆ ನೀಡಲು ಆರಂಭಿಸಿವೆ. ಸರ್ಕಾರಿ ಸ್ವಾಮ್ಯದ ಪಂಜಾಬ್‌ ಆ್ಯಂಡ್ ಸಿಂಧ್‌ ಬ್ಯಾಂಕ್‌ ಠೇವಣಿಗಳಿಗೆ ವಾರ್ಷಿಕ ಶೇಕಡ 8ರಿಂದ ಶೇ 8.50ರವರೆಗೆ ಬಡ್ಡಿ ನೀಡುತ್ತಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ಸಾಲ ನೀಡಿಕೆ ಪ್ರಮಾಣವು ಠೇವಣಿ ಸಂಗ್ರಹದ ಪ್ರಮಾಣಕ್ಕಿಂತ ಹೆಚ್ಚಾಗಿದೆ. ಹೀಗಾಗಿ ಬ್ಯಾಂಕ್‌ಗಳು ಠೇವಣಿ ಆಕರ್ಷಿಸಲು ಹೆಚ್ಚಿನ ಬಡ್ಡಿ ನೀಡಲು ಮುಂದಾಗಿವೆ.

2022ರಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಹೆಚ್ಚಿನ ಅವಧಿಗೆ ಶೇ 6ಕ್ಕಿಂತ ಮೇಲ್ಮಟ್ಟದಲ್ಲಿ ಉಳಿದಿತ್ತು. ಇದರಿಂದಾಗಿ ಆರ್‌ಬಿಐ ರೆಪೊ ದರವನ್ನು ಶೇ 6.50ಕ್ಕೆ ಹೆಚ್ಚಿಸಿದೆ.

ADVERTISEMENT

2023ರ ಜನವರಿ 13ಕ್ಕೆ ಕೊನೆಗೊಂಡ ಪಾಕ್ಷಿಕದಲ್ಲಿ ಸಾಲ ನೀಡಿಕೆ ಪ್ರಮಾಣವು ಶೇ 16.5ರಷ್ಟು ಆಗಿದೆ. ಆದರೆ ಠೇವಣಿ ಸಂಗ್ರಹ ಪ್ರಮಾಣವು ಶೇ 10.6ರಷ್ಟು ಮಾತ್ರ ಇದೆ. ವಾಸ್ತವದಲ್ಲಿ, ಠೇವಣಿ ಸಂಗ್ರಹ ಪ್ರಮಾಣವು ವರ್ಷದಿಂದ ಒಂದಂಕಿ ಮಟ್ಟದಲ್ಲಿಯೇ ಇದೆ.

ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ, 400 ದಿನಗಳ ನಿಶ್ಚಿತ ಠೇವಣಿಗೆ ಶೇ 7.10ರಷ್ಟು ಬಡ್ಡಿ ನೀಡುತ್ತಿದೆ. ಹಿರಿಯ ನಾಗರಿಕರಿಗೆ ಶೇ 7.60ರಷ್ಟು ಬಡ್ಡಿ ನೀಡುತ್ತಿದೆ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, 444 ದಿನಗಳ ನಿಶ್ಚಿತ ಠೇವಣಿಗೆ ಹಿರಿಯ ನಾಗರಿಕರಿಗೆ ಶೇ 7.85ರಷ್ಟು ಹಾಗೂ ಇತರರಿಗೆ ಶೇ 7.35ರಷ್ಟು ಬಡ್ಡಿ ನೀಡುತ್ತಿದೆ. ಯೂನಿಯನ್ ಬ್ಯಾಂಕ್‌ ಆಫ್ ಇಂಡಿಯಾ 800 ದಿನಗಳ ನಿಶ್ಚಿತ ಠೇವಣಿಗೆ ಶೇ 7.30ರಷ್ಟು (ಹಿರಿಯ ನಾಗರಿಕರಿಗೆ ಶೇ 7.80ರಷ್ಟು) ಬಡ್ಡಿ ಕೊಡುತ್ತಿದೆ.

ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ 666 ದಿನಗಳ ನಿಶ್ಚಿತ ಠೇವಣಿಗೆ ಶೇ 7.25ರಷ್ಟು, ಬ್ಯಾಂಕ್ ಆಫ್ ಬರೋಡ 399 ದಿನಗಳ ನಿಶ್ಚಿತ ಠೇವಣಿಗೆ ಶೇ 7.05ರಷ್ಟು, ಬ್ಯಾಂಕ್ ಆಫ್ ಮಹಾರಾಷ್ಟ್ರ 200 ದಿನಗಳ ನಿಶ್ಚಿತ ಠೇವಣಿಗೆ ಶೇ 7ರಷ್ಟು ಬಡ್ಡಿ ನೀಡುತ್ತಿವೆ. ಹಿರಿಯ ನಾಗರಿಕಗೆ ಹೆಚ್ಚುವರಿಯಾಗಿ ಶೇ 0.50ರಷ್ಟು ಬಡ್ಡಿ ಇರುತ್ತದೆ.

400 ದಿನಗಳ ನಿಶ್ಚಿತ ಠೇವಣಿಗೆ ಕೆನರಾ ಬ್ಯಾಂಕ್ ಶೇ 7.15ರಷ್ಟು, ಇಂಡಿಯನ್‌ ಬ್ಯಾಂಕ್‌ 555 ದಿನಗಳ ಠೇವಣಿಗೆ ಶೇ 7ರಷ್ಟು, ಯುಕೊ ಬ್ಯಾಂಕ್ 666 ದಿನಗಳ ಠೇವಣಿಗೆ ಶೇ 7.15ರಷ್ಟು, ಇಂಡಿಯನ್ ಓವರ್ಸೀಸ್ ಬ್ಯಾಂಕ್ 444 ದಿನಗಳ ಠೇವಣಿಗೆ ಶೇ 7ರಷ್ಟು ಬಡ್ಡಿ ನೀಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.