ADVERTISEMENT

ದೇಶದ ಜಿಡಿಪಿ ಬೆಳವಣಿಗೆ ಅಂದಾಜು ಪರಿಷ್ಕರಣೆ

ಪಿಟಿಐ
Published 10 ಸೆಪ್ಟೆಂಬರ್ 2025, 14:00 IST
Last Updated 10 ಸೆಪ್ಟೆಂಬರ್ 2025, 14:00 IST
ಜಿಡಿಪಿ
ಜಿಡಿಪಿ   

ನವದೆಹಲಿ: ಪ್ರಸಕ್ತ ವರ್ಷಕ್ಕೆ ಸಂಬಂಧಿಸಿದ ದೇಶದ ಜಿಡಿಪಿ ಬೆಳವಣಿಗೆ ದರದ ಅಂದಾಜನ್ನು ಫಿಚ್ ರೇಟಿಂಗ್ಸ್ ಸಂಸ್ಥೆಯು ಶೇಕಡ 6.9ಕ್ಕೆ ಹೆಚ್ಚಿಸಿದೆ. ಈ ಮೊದಲು ಅದು ಬೆಳವಣಿಗೆ ದರವು ಶೇ 6.5ರಷ್ಟು ಇರಲಿದೆ ಎಂದು ಅಂದಾಜು ಮಾಡಿತ್ತು.

ಜೂನ್‌ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ದರವು ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿ ಇದ್ದುದು ಹಾಗೂ ದೇಶಿ ಮಾರುಕಟ್ಟೆಯಲ್ಲಿನ ಬಳಕೆ ಆಧಾರಿತ ಬೇಡಿಕೆಯು ಅಂದಾಜು ಹೆಚ್ಚಿಸುವುದಕ್ಕೆ ಕಾರಣ ಎಂದು ಸಂಸ್ಥೆ ಹೇಳಿದೆ.

ಸುಂಕ ಸಂಬಂಧಿ ಅನಿಶ್ಚಿತತೆಗಳ ನಂತರ ಭಾರತದ ಜಿಡಿಪಿ ಬೆಳವಣಿಗೆ ದರದ ಅಂದಾಜನ್ನು ಹಲವು ಸಂಸ್ಥೆಗಳು ತಗ್ಗಿಸಿದ್ದವು. ಈಗ ಭಾರತದ ಜಿಡಿಪಿ ಬೆಳವಣಿಗೆ ದರದ ಅಂದಾಜನ್ನು ಹೆಚ್ಚು ಮಾಡುತ್ತಿರುವ ಮೊದಲ ಜಾಗತಿಕ ರೇಟಿಂಗ್ಸ್ ಸಂಸ್ಥೆ ಫಿಚ್ ಆಗಿದೆ.

ADVERTISEMENT

ಅಮೆರಿಕದ ಜೊತೆಗಿನ ವ್ಯಾಪಾರಕ್ಕೆ ಸಂಬಂಧಿಸಿದ ಬಿಕ್ಕಟ್ಟು ಈಚಿನ ತಿಂಗಳುಗಳಲ್ಲಿ ತೀವ್ರಗೊಂಡಿದೆ. ಅಮೆರಿಕವು ಭಾರತದ ಸರಕುಗಳ ಮೇಲೆ ಒಟ್ಟು ಶೇ 50ರಷ್ಟು ಸುಂಕ ವಿಧಿಸಿದೆ.

‘ಇದು ಕಾಲಕ್ರಮೇಣ ಮಾತುಕತೆ ಮೂಲಕ ಕಡಿಮೆ ಮಟ್ಟಕ್ಕೆ ಬರಲಿದೆ ಎಂಬುದು ನಮ್ಮ ನಿರೀಕ್ಷೆ. ಆದರೆ ವ್ಯಾಪಾರ ಸಂಬಂಧದ ಸುತ್ತಲಿನ ಅನಿಶ್ಚಿತತೆಗಳು ಹೂಡಿಕೆಯ ಮೇಲೆ ಪರಿಣಾಮ ಬೀರಬಹುದು. ಜಿಎಸ್‌ಟಿ ವ್ಯವಸ್ಥೆಗೆ ಸರ್ಕಾರವು ಸುಧಾರಣೆ ತಂದಿದೆ. ಇದು ಗ್ರಾಹಕರು ಈ ವರ್ಷದಲ್ಲಿ ಹಾಗೂ ಮುಂದಿನ ಹಣಕಾಸು ವರ್ಷಗಳಲ್ಲಿ ಹೆಚ್ಚು ವೆಚ್ಚ ಮಾಡುವಂತೆ ಉತ್ತೇಜನ ನೀಡಲಿದೆ’ ಎಂದು ಫಿಚ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.