ADVERTISEMENT

ಕನಿಷ್ಠ ವೇತನ ಹೆಚ್ಚಳ ನೀತಿ ವಾಪಸ್‌ ಪಡೆಯಲು ಎಫ್‌ಕೆಸಿಸಿಐ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2025, 9:52 IST
Last Updated 24 ಏಪ್ರಿಲ್ 2025, 9:52 IST
ಸಭೆಯಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಮಾತನಾಡಿದರು
ಸಭೆಯಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಮಾತನಾಡಿದರು   

ಬೆಂಗಳೂರು: ವಿವಿಧ ಉದ್ದಿಮೆಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಕನಿಷ್ಠ ವೇತನ ದರ ನಿಗದಿಪಡಿಸಿ ರಾಜ್ಯ ಸರ್ಕಾರ ಪ್ರಕಟಿಸಿರುವ ಕರಡು ಅಧಿಸೂಚನೆಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಮತ್ತು ಕೈಗಾರಿಕಾ ಸಂಘ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ.

ನಗರದಲ್ಲಿ ಬುಧವಾರ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಮಹಾಸಂಸ್ಥೆಯಿಂದ ರಾಜ್ಯದ ಎಲ್ಲಾ ಕೈಗಾರಿಕಾ ಸಂಘ ಸಂಸ್ಥೆಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಯಿತು.

ಕನಿಷ್ಠ ವೇತನ ಹೆಚ್ಚಳವು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆ  (ಎಂಎಸ್‌ಎಂಇ) ವಲಯದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಚರ್ಚಿಸಲಾಯಿತು.

ADVERTISEMENT

ಸರ್ಕಾರವು ತಕ್ಷಣವೇ ಈ ಕರಡು ಅಧಿಸೂಚನೆಯನ್ನು ಹಿಂಪಡೆಯದಿದ್ದರೆ ಸುಮಾರು ಶೇ 20ರಷ್ಟು ಎಂಎಸ್‌ಎಂಇ ಘಟಕಗಳು ಸ್ಥಗಿತಗೊಳ್ಳುವ ಸಾಧ್ಯತೆಯಿದೆ ಎಂದು ಎಫ್‌ಕೆಸಿಸಿಐ ಹೇಳಿದೆ.

‘ಕಾರ್ಮಿಕರಿಗೆ ನ್ಯಾಯಯುತ ಪರಿಹಾರ ನೀಡಲು ನಮ್ಮ ಬೆಂಬಲವಿದೆ. ಆದರೆ, ಸಣ್ಣ ಪ್ರಮಾಣದ ಕೈಗಾರಿಕೆಗಳ ಪಾವತಿ ಸಾಮರ್ಥ್ಯವನ್ನು ನಿರ್ಣಯಿಸದೆ ಸರ್ಕಾರವು ವಿವೇಚನಾರಹಿತ ನಿರ್ಧಾರ ಕೈಗೊಂಡಿದೆ. ರಾಜ್ಯದಲ್ಲಿನ ಕೈಗಾರಿಕಾ ವೆಚ್ಚವು ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕಿಂತ ಹೆಚ್ಚಾಗಿದೆ’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಹೇಳಿದರು.

ಕಾರ್ಮಿಕ ಇಲಾಖೆ ಹೊರಡಿಸಿರುವ ಕರಡು ಅಧಿಸೂಚನೆಯು ಒಳ್ಳೆಯ ಉದ್ದೇಶದಿಂದ ಕೂಡಿದೆ. ಆದರೆ ಜವಳಿ, ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಪ್ಯಾಕೇಜಿಂಗ್‌ನಂತಹ ಕಾರ್ಮಿಕ ವಲಯಗಳಲ್ಲಿ ಹೂಡಿಕೆ ಆಕರ್ಷಿಸುವಲ್ಲಿ ಕರ್ನಾಟಕ ವಿಫಲವಾಗುತ್ತದೆ. ಇದು ಮುಂದುವರಿದರೆ ಎಂಎಸ್‌ಎಂಇ ಬೆಳವಣಿಗೆಗೆ ತೊಡಕಾಗಲಿದೆ ಎಂದರು.

ಬೇಡಿಕೆ ಏನು?: 

ಎಂಎಸ್‌ಎಂಇಗಳಿಗೆ ಪ್ರತ್ಯೇಕ ಕನಿಷ್ಠ ವೇತನ ಸ್ಲ್ಯಾಬ್‌ ಪರಿಚಯಿಸಬೇಕು. ವೇತನ ಏರಿಕೆ ಸಂಬಂಧ ಸಮಿತಿಯ ಸಭೆ ಕರೆಯಬೇಕು. ವಿದ್ಯುತ್ ಸಬ್ಸಿಡಿ, ಕಾರ್ಮಿಕ ಸೆಸ್ ಮನ್ನಾ ಅಥವಾ ಕಾರ್ಯನಿರತ ಬಂಡವಾಳ ಬೆಂಬಲದ ಮೂಲಕ ಪರಿಹಾರ ಒದಗಿಸಬೇಕು ಎಂದು ಎಫ್‌ಕೆಸಿಸಿಐ ಒತ್ತಾಯಿಸಿದೆ.

ಸಭೆಯಲ್ಲಿ ಎಫ್‌ಕೆಸಿಸಿಐ ಹಿರಿಯ ಉಪಾಧ್ಯಕ್ಷೆ ಉಮಾರೆಡ್ಡಿ, ಉಪಾಧ್ಯಕ್ಷ ಟಿ. ಸಾಯಿರಾಂ ಪ್ರಸಾದ್‌, ಕಾರ್ಮಿಕ ಸಮಿತಿ ಅಧ್ಯಕ್ಷ ಪಿ.ಸಿ. ರಾವ್‌, ಕಾಸಿಯಾ ಅಧ್ಯಕ್ಷ  ಎಂ.ಜಿ. ರಾಜಗೋಪಾಲ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.