ADVERTISEMENT

ಕೈಗಾರಿಕಾ ಪಾರ್ಕ್‌ಗಳಲ್ಲಿ ಮಹಿಳಾ ಮೀಸಲು:ಸರ್ಕಾರಕ್ಕೆ FKCCI ಅಧ್ಯಕ್ಷೆ ಆಗ್ರಹ

ರಾಜ್ಯ ಸರ್ಕಾರಕ್ಕೆ ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 16:16 IST
Last Updated 14 ಅಕ್ಟೋಬರ್ 2025, 16:16 IST
ಉಮಾ ರೆಡ್ಡಿ
ಉಮಾ ರೆಡ್ಡಿ   

ಬೆಂಗಳೂರು: ರಾಜ್ಯದ ಹೊಸ ಕೈಗಾರಿಕಾ ಪಾರ್ಕ್‌ಗಳಲ್ಲಿ ಶೇಕಡ 30ರಷ್ಟು ಸ್ಥಳಾವಕಾಶವನ್ನು ಮಹಿಳಾ ಉದ್ಯಮಿಗಳಿಗೆ ಮೀಸಲಾಗಿ ಇರಿಸಬೇಕು ಎಂಬ ಕೋರಿಕೆಯನ್ನು ಸರ್ಕಾರದ ಮುಂದೆ ಇರಿಸಲಾಗುತ್ತದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ಅಧ್ಯಕ್ಷೆ ಉಮಾ ರೆಡ್ಡಿ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು ‘ಈ ಬಗೆಯಲ್ಲಿ ಸೌಲಭ್ಯವನ್ನು ಕಲ್ಪಿಸಿದಾಗ ರಾಜ್ಯದ ಉದ್ಯಮ ವಲಯದಲ್ಲಿ ಮಹಿಳೆಯರಿಗೆ ಸೂಕ್ತ ಅವಕಾಶಗಳು ಸಿಗುವಂತೆ ಆಗುತ್ತದೆ’ ಎಂದು ಹೇಳಿದರು. ಎಫ್‌ಕೆಸಿಸಿಐ ಅಧ್ಯಕ್ಷೆಯಾಗಿ ಈಚೆಗಷ್ಟೇ ಅಧಿಕಾರ ವಹಿಸಿಕೊಂಡಿರುವ ಉಮಾ ಅವರು ಸಂಘಟನೆಯ ಕುರಿತಾದ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು.

ಸೇವಾ ವಲಯದಲ್ಲಿ ಇರುವ ಮಹಿಳಾ ಉದ್ಯಮಗಳಿಗೆ ರಿಯಾಯಿತಿ ದರಕ್ಕೆ ಸಾಲ ಕೊಡುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ರೂಪಿಸಿದೆ. ಇದನ್ನು ತಯಾರಿಕಾ ವಲಯದ ಮಹಿಳಾ ಉದ್ಯಮಿಗಳಿಗೂ ವಿಸ್ತರಿಸಬೇಕು ಎಂದು ಕೋರುವುದಾಗಿ ಅವರು ತಿಳಿಸಿದರು. ಎಫ್‌ಕೆಸಿಸಿಐನಲ್ಲಿ ಈಗಿನ ಸದಸ್ಯರ ಪೈಕಿ ಶೇ 15ರಷ್ಟು ಮಂದಿ ಮಹಿಳೆಯರು ಇದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ರಾಜ್ಯದಲ್ಲಿ ಎಂಎಸ್‌ಎಂಇ ಉದ್ಯಮ ವಲಯದಲ್ಲಿ ಅತಿಸಣ್ಣ ಹಾಗೂ ಸಣ್ಣ ಗಾತ್ರದ ಉದ್ಯಮಗಳ ಪಾಲು ಶೇ 90ಕ್ಕೂ ಹೆಚ್ಚು ಇದೆ. ಮಧ್ಯಮ ಗಾತ್ರದ ಉದ್ಯಮಗಳ ಪಾಲು ಕಡಿಮೆ ಇದೆ. ಹೀಗಾಗಿ ಮೊದಲ ಎರಡು ವರ್ಗಗಳಿಗೆ ಸೇರಿದ ಉದ್ಯಮಗಳಿಗಾಗಿ ಪ್ರತ್ಯೇಕ ನೀತಿಯೊಂದನ್ನು ರೂಪಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸುವುದಾಗಿ ಅವರು ಹೇಳಿದರು.

‘ರಾಜ್ಯದಲ್ಲಿ 10 ಲಕ್ಷ ಹೊಸ ಉದ್ಯಮಿಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಲಾಗಿದೆ. ಈ ಗುರಿಯನ್ನು ನಾನು ಒಂದು ವರ್ಷದ ಅವಧಿಯಲ್ಲಿಯೇ ತಲುಪುವೆ ಎನ್ನುತ್ತಿಲ್ಲ. ಇದು ದೀರ್ಘಾವಧಿಯ ಒಂದು ಗುರಿ. ಪ್ರತಿಯೊಬ್ಬ ಹೊಸ ಉದ್ಯಮಿಯು ₹2 ಲಕ್ಷದಷ್ಟು ಹಣವನ್ನು ತೊಡಗಿಸಿದರೂ, ರಾಜ್ಯದ ಉದ್ಯಮ ವಲಯದಲ್ಲಿ ₹20 ಸಾವಿರ ಕೋಟಿಯಷ್ಟು ಹಣ ಹೂಡಿಕೆ ಆದಂತಾಗುತ್ತದೆ’ ಎಂದು ಅವರು ತಮ್ಮ ಕನಸನ್ನು ಹಂಚಿಕೊಂಡರು.

ಕನಿಷ್ಠ ವೇತನ: ವಿವಿಧ ವಲಯಗಳ ನೌಕರರಿಗೆ ₹26 ಸಾವಿರ ಕನಿಷ್ಠ ಮಾಸಿಕ ವೇತನ ನಿಗದಿ ಮಾಡಬೇಕು ಎಂಬ ನಿಯಮಕ್ಕೆ ಎಫ್‌ಕೆಸಿಸಿಐ ಸಹಮತ ಇಲ್ಲ ಎಂದು ಉಮಾ ಅವರು ಸ್ಪಷ್ಟಪಡಿಸಿದರು.

ಈ ಪ್ರಮಾಣದ ಕನಿಷ್ಠ ವೇತನವು ಎಂಎಸ್‌ಎಂಇ ವಲಯಕ್ಕೆ ಹೊರೆಯಾಗುತ್ತದೆ. ಕೈಗಾರಿಕೆಗಳು ಕರ್ನಾಟಕದಲ್ಲಿಯೇ ಉಳಿಯಬೇಕು. ನೆರೆ ರಾಜ್ಯಗಳಿಗೆ ಅವು ವಲಸೆ ಹೋಗಬಾರದು. ಅಲ್ಲಿಯ ಕನಿಷ್ಠ ವೇತನವು ಕರ್ನಾಟಕದಲ್ಲಿ ಜಾರಿಗೆ ಉದ್ದೇಶಿಸಿರುವ ಕನಿಷ್ಠ ವೇತನದ ಮೊತ್ತಕ್ಕಿಂತ ಕಡಿಮೆ ಇದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರವಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.