ADVERTISEMENT

ಐಪಿಒ: ಸಣ್ಣ ಉದ್ದಿಮೆಗಳಿಗೆ ಎಫ್‌ಕೆಸಿಸಿಐ ನೆರವು

ಯಾವ ಕಂಪನಿ ಐಪಿಒಗೆ ಸೂಕ್ತ ಎಂಬ ಪರಿಶೀಲನೆ: ಐ.ಎಸ್. ಪ್ರಸಾದ್

ವಿಜಯ್ ಜೋಷಿ
Published 27 ಡಿಸೆಂಬರ್ 2021, 18:15 IST
Last Updated 27 ಡಿಸೆಂಬರ್ 2021, 18:15 IST
ಐ.ಎಸ್. ‍ಪ್ರಸಾದ್
ಐ.ಎಸ್. ‍ಪ್ರಸಾದ್   

ಬೆಂಗಳೂರು: ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು ಬಂಡವಾಳ ಸಂಗ್ರಹಕ್ಕೆ ಹೊಸ ಮಾರ್ಗ ಕಂಡುಕೊಳ್ಳಲು ‘ಆರಂಭಿಕ ಸಾರ್ವಜನಿಕ ಕೊಡುಗೆ’ಯ (ಐಪಿಒ) ಮೊರೆ ಹೋಗಬಹುದೇ ಎಂಬ ಬಗ್ಗೆಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಪರಿಶೀಲನೆ ನಡೆಸಿದೆ.

ರಾಜ್ಯದಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ (ಎಸ್‌ಎಂಇ ವಲಯ) ಉದ್ದಿಮೆಗಳು ಐಪಿಒ ಮೂಲಕ ತಮ್ಮ ಷೇರುಗಳನ್ನು ಸಾರ್ವಜನಿಕರಿಗೆ ಹಾಗೂ ಸಾಂಸ್ಥಿಕ ಹೂಡಿಕೆದಾರರಿಗೆ ಮಾರಾಟ ಮಾಡಿ, ಬಂಡವಾಳ ಸಂಗ್ರಹಿ
ಸಿದ ಉದಾಹರಣೆಗಳು ಹೆಚ್ಚಿಗೆ ಇಲ್ಲ. ಹೀಗಿದ್ದರೂ, ಈಗಿನ ಸಂದರ್ಭದಲ್ಲಿ ಐಪಿಒ ಮಾರ್ಗದಲ್ಲಿ ಬಂಡವಾಳ ಸಂಗ್ರಹಿಸಿ, ಯಾವೆಲ್ಲ ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ನೋಂದಾಯಿತ ಆಗುವ ಅವಕಾಶ ಇದೆ ಎಂಬ ಬಗ್ಗೆ ಎಫ್‌ಕೆಸಿಸಿಐ ಪರಿಶೀಲನೆ ನಡೆಸುತ್ತಿದೆ.

‘ಯಾವ ವಲಯದ, ಯಾವ ಕಂಪನಿಗಳು ಬಂಡವಾಳದ ಅಗತ್ಯಕ್ಕಾಗಿ ಐಪಿಒ ನಡೆಸಬಹುದು ಎನ್ನುವುದನ್ನು ಅರಿಯಲು ನಮ್ಮ ತಂಡವೊಂದಕ್ಕೆ ಸೂಚನೆ ನೀಡಲಾಗಿದೆ. ಐಪಿಒಗೆ ಮುಂದಾಗಲು ಅರ್ಹತೆ ಇರುವ ಉದ್ದಿಮೆಗಳಿಗೆ ನಮ್ಮ ತಂಡವು ಕಾನೂನು ಸಲಹೆ ಸೇರಿದಂತೆ ಅಗತ್ಯ ನೆರವು ನೀಡಲಿದೆ’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಐ.ಎಸ್. ಪ್ರಸಾದ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ದೇಶದಲ್ಲಿ ಈ ವರ್ಷದಲ್ಲಿ ದಾಖಲೆಯ ಮಟ್ಟದ ಬಂಡವಾಳ ಐಪಿಒ ಮೂಲಕ ಸಂಗ್ರಹ ಆಗಿದೆ. ಪ್ರಸಕ್ತ ಹಣ
ಕಾಸು ವರ್ಷದಲ್ಲಿ ಈವರೆಗೆ 63 ಕಂಪನಿ
ಗಳು ಐಪಿಒ ಮೂಲಕ ಒಟ್ಟಾರೆ ₹ 1.18 ಲಕ್ಷ ಕೋಟಿ ಬಂಡವಾಳ ಸಂಗ್ರಹಿಸಿವೆ ಎಂದು ಪ್ರೈಮ್‌ ಡೇಟಾಬೇಸ್‌ ಸಮೂಹ ಹೇಳಿದೆ. ವಿವಿಧ ಕಂಪನಿಗಳ ಐಪಿಒ ಪ್ರಕ್ರಿಯೆಯಲ್ಲಿ ಸಣ್ಣ ಹೂಡಿಕೆದಾರರ ಪಾಲ್ಗೊಳ್ಳುವಿಕೆ ಕೂಡ ಹೆಚ್ಚಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಐಪಿಒ ಮಾತ್ರವೇ ಅಲ್ಲದೆ, ವೆಂಚರ್‌ ಕ್ಯಾಪಿಟಲಿಸ್ಟ್‌ಗಳಿಂದ ಹಾಗೂ ಏಂಜೆಲ್‌ ಇನ್ವೆಸ್ಟರ್‌ಗಳಿಂದ ಹೂಡಿಕೆ ಆಕರ್ಷಿಸುವ ಬಗ್ಗೆಯೂ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಮಾಹಿತಿ ನೀಡುವ ಕೆಲಸ ನಡೆಯಲಿದೆ ಎಂದು ಪ್ರಸಾದ್ ತಿಳಿಸಿದರು.

ಕೋವಿಡ್‌ನ ಪ್ರಭಾವ ಇನ್ನೂ ತಗ್ಗಿಲ್ಲದ ಕಾರಣ ಐಪಿಒಗೆ ಮುಂದಾಗಲು ಎಲ್ಲ ಕಂಪನಿಗಳಿಗೆ ಇದು ಒಳ್ಳೆಯ ಸಂದರ್ಭ ಅಲ್ಲ. ಆದರೆ, ಕೋವಿಡ್‌ ಕಾರಣದಿಂದಾಗಿ ಉದ್ಯಮದ ಕೆಲವು ವಲಯಗಳಲ್ಲಿ ಹೆಚ್ಚಿನ ವಹಿವಾಟು ನಡೆದಿದೆ. ಅವು ಈಗ ಐಪಿಒಗೆ ಮುಂದಾಗಲು ತೊಂದರೆ ಆಗದು ಎಂದು ಅವರು ಹೇಳಿದರು.

ಒಂದು ವರ್ಷದ ಅವಧಿಯಲ್ಲಿ ಎಸ್‌ಎಂಇ ವಲಯದ ನಾಲ್ಕರಿಂದ ಐದು ಕಂಪನಿಗಳಿಗೆ ಐಪಿಒ ಮೂಲಕ ಬಂಡವಾಳ ಸಂಗ್ರಹಿಸಲು ಸಾಧ್ಯವಾಗುವಂತೆ ಮಾಡುವ ಗುರಿ ಹೊಂದಲಾಗಿದೆ ಎಂದು ಎಫ್‌ಕೆಸಿಸಿಐ ಮೂಲಗಳು ತಿಳಿಸಿವೆ.

ಎಸ್‌ಎಂಇ ವಲಯದ, ಷೇರುಪೇಟೆಯಲ್ಲಿ ನೋಂದಾಯಿತ ಆಗಿರುವ ಕಂಪನಿಗಳಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರು ಆಸಕ್ತಿ ತೋರಿಸುತ್ತಿರುವುದು ಹೆಚ್ಚಾಗುತ್ತಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಅಭಿಪ್ರಾಯಪಟ್ಟಿದೆ.

‘ಹೂಡಿಕೆದಾರರ ಸಮುದಾಯವು ಎಸ್‌ಎಂಇ ವಲಯದ ಉದ್ದಿಮೆಗಳಲ್ಲಿ ದೀರ್ಘ ಅವಧಿಗೆ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಿರುವ ಕಾರಣ, ಎಸ್‌ಎಂಇ ಉದ್ದಿಮೆಗಳು ಬಂಡವಾಳಕ್ಕಾಗಿ ಬ್ಯಾಂಕ್‌ಗಳನ್ನು ಮಾತ್ರ ನೆಚ್ಚಿಕೊಳ್ಳುವ ಬದಲು ಮಾರುಕಟ್ಟೆಯ ಕಡೆ ಮುಖ ಮಾಡುವ ಬಗ್ಗೆಯೂ ಆಲೋಚಿಸಬೇಕು’ ಎಂದು ಕಾಸಿಯಾ ಮಾಜಿ ಅಧ್ಯಕ್ಷ ಆರ್. ರಾಜು ಅಭಿಪ್ರಾಯ ವ್ಯಕ್ತಪಡಿಸಿದರು.

ಅಖಿಲ ಭಾರತ ಮಟ್ಟದಲ್ಲಿ ಇದುವರೆಗೆ ಅಂದಾಜು 357 ಎಸ್‌ಎಂಇ ಕಂಪನಿಗಳು ಬಂಡವಾಳ ಮಾರುಕಟ್ಟೆ ಮೂಲಕ ₹ 3,700 ಕೋಟಿ ಬಂಡವಾಳ ಸಂಗ್ರಹಿಸಿವೆ. ಕಂಪನಿಗಳ ಮಾರುಕಟ್ಟೆ ಮೌಲ್ಯವು ಅಂದಾಜು ₹ 17 ಸಾವಿರ ಕೋಟಿ ಆಗಿದೆ ಎಂದು ಪ್ರಸಾದ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.