ಮುಂಬೈ: ಕಳೆದ ವಾರ ಇಳಿಕೆ ಕಂಡಿದ್ದ ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ಮಾರ್ಚ್ 7ಕ್ಕೆ ಕೊನೆಗೊಂಡ ವಾರದಲ್ಲಿ ಏರಿಕೆಯಾಗಿದೆ. ಕಳೆದ ಎರಡು ವರ್ಷದ ಅವಧಿಯಲ್ಲಿ ಆಗಿರುವ ಅತಿಹೆಚ್ಚು ಏರಿಕೆ ಇದಾಗಿದೆ.
ಒಟ್ಟು ₹1.32 ಲಕ್ಷ ಕೋಟಿ ಹೆಚ್ಚಳವಾಗಿದ್ದು, ಒಟ್ಟು ಮೀಸಲು ಸಂಗ್ರಹವು ₹56.85 ಲಕ್ಷ ಕೋಟಿಗೆ ಮುಟ್ಟಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶನಿವಾರ ತಿಳಿಸಿದೆ.
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಇಳಿಕೆ ಕಂಡಿತ್ತು. ದೇಶದ ಆಮದು ಮತ್ತು ರಫ್ತು ವಹಿವಾಟು ನಡುವಿನ ವ್ಯತ್ಯಾಸವಾದ ವ್ಯಾಪಾರ ಕೊರತೆಯೂ ಮೌಲ್ಯ ಕುಸಿತಕ್ಕೆ ಕಾರಣವಾಗಿತ್ತು. ಆರ್‌ಬಿಐನ ಮಧ್ಯಪ್ರವೇಶದಿಂದಾಗಿ ಸದ್ಯ ರೂಪಾಯಿ ಬಲಗೊಳ್ಳುತ್ತಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಕಳೆದ ವರ್ಷದ ಸೆಪ್ಟೆಂಬರ್ ಅಂತ್ಯದಲ್ಲಿ ವಿದೇಶಿ ವಿನಿಮಯ ಮೀಸಲು ಸಂಗ್ರಹವು ₹61.28 ಲಕ್ಷ ಕೋಟಿಗೆ ತಲುಪುವ ಮೂಲಕ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿತ್ತು.
ಆರ್‌ಬಿಐ ಇತ್ತೀಚೆಗೆ ಬ್ಯಾಂಕ್‌ಗಳಿಂದ ₹86 ಸಾವಿರ ಕೋಟಿ ಮೌಲ್ಯದ ಡಾಲರ್‌ಗಳನ್ನು ಖರೀದಿಸಿದೆ. ಇದರಿಂದ ರೂಪಾಯಿ ಮೌಲ್ಯ ಬಲಗೊಂಡಿದ್ದು, ವಿದೇಶಿ ವಿನಿಮಯ ಮೀಸಲು ಸಂಗ್ರಹದಲ್ಲೂ ಏರಿಕೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ.
ವಿದೇಶಿ ವಿನಿಮಯ ಸಂಗ್ರಹದ ಪ್ರಮುಖ ಭಾಗವಾದ ವಿದೇಶಿ ಕರೆನ್ಸಿಗಳ ಸಂಗ್ರಹವು ಈ ವಾರದ ಅವಧಿಯಲ್ಲಿ ₹1.21 ಲಕ್ಷ ಕೋಟಿ ಏರಿಕೆಯಾಗಿದ್ದು, ಒಟ್ಟು ಸಂಗ್ರಹವು ₹48.45 ಲಕ್ಷ ಕೋಟಿ ಆಗಿದೆ.
ಚಿನ್ನದ ಮೀಸಲು ಸಂಗ್ರಹವು ₹9,154 ಕೋಟಿ ಹೆಚ್ಚಳವಾಗಿದ್ದು, ಒಟ್ಟು ₹6.46 ಲಕ್ಷ ಕೋಟಿಗೆ ಮುಟ್ಟಿದೆ. ಸ್ಪೆಷಲ್ ಡ್ರಾಯಿಂಗ್ ರೈಟ್ಸ್ (ಎಸ್‌ಡಿಆರ್) ₹1,840 ಕೋಟಿ ಹೆಚ್ಚಳವಾಗಿದ್ದು, ₹88,765 ಕೋಟಿ ಆಗಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿನ (ಐಎಂಎಫ್) ಮೀಸಲು ಸಂಗ್ರಹವು ₹599 ಕೋಟಿ ಕಡಿಮೆಯಾಗಿದ್ದು, ₹36 ಸಾವಿರ ಕೋಟಿ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.