ADVERTISEMENT

ವಿಪ್ರೊದಲ್ಲಿ 300 ಜನರಿಂದ ಮೂನ್‌ಲೈಟಿಂಗ್‌: ಪ್ರೇಮ್‌ಜಿ

ಪಿಟಿಐ
Published 21 ಸೆಪ್ಟೆಂಬರ್ 2022, 13:41 IST
Last Updated 21 ಸೆಪ್ಟೆಂಬರ್ 2022, 13:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿಪ್ರೊ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಒಟ್ಟು 300 ಮಂದಿ ಪ್ರತಿಸ್ಪರ್ಧಿ ಕಂಪನಿಯೊಂದಕ್ಕೆ ಕೂಡ ಕೆಲಸ ಮಾಡುತ್ತಿದ್ದುದು ಪತ್ತೆಯಾಗಿದೆ ಎಂದು ವಿಪ್ರೊ ಅಧ್ಯಕ್ಷ ರಿಷದ್ ‍ಪ್ರೇಮ್‌ಜಿ ಹೇಳಿದ್ದಾರೆ.

ಐ.ಟಿ. ಉದ್ಯೋಗಿಗಳು ಒಂದು ಕಂಪನಿಗೆ ಕೆಲಸ ಮಾಡುತ್ತಲೇ, ಇನ್ನೊಂದು ಕಂಪನಿಗಾಗಿಯೂ ಕೆಲಸ ಮಾಡಿಕೊಡುವ ಪ್ರವೃತ್ತಿಯನ್ನು (ಮೂನ್‌ಲೈಟಿಂಗ್) ಪ್ರೇಮ್‌ಜಿ ಅವರು ಈ ಹಿಂದೆ ಕಟುವಾಗಿ ಟೀಕಿಸಿದ್ದರು. ಕಾರ್ಯಕ್ರಮವೊಂದರಲ್ಲಿ ಬುಧವಾರ ಮಾತನಾಡಿದ ಪ್ರೇಮ್‌ಜಿ ಅವರು, ವಿಪ್ರೊದಲ್ಲಿ ಕೆಲಸ ಮಾಡುತ್ತಲೇ ಪ್ರತಿಸ್ಪರ್ಧಿ ಕಂಪನಿಗಳಿಗೂ ಕೆಲಸ ಮಾಡುವವರಿಗೆ ತಮ್ಮ ಕಂಪನಿಯಲ್ಲಿ ಸ್ಥಾನ ಇಲ್ಲ ಎಂದು ಹೇಳಿದ್ದಾರೆ.

ನಿಯಮ ಉಲ್ಲಂಘಿಸಿದ ನಿರ್ದಿಷ್ಟ ಪ್ರಕರಣಗಳಲ್ಲಿ ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಪ್ರೇಮ್‌ಜಿ ಅವರು ನಂತರ ತಿಳಿಸಿದ್ದಾರೆ.

‘ವಿಪ್ರೊದಲ್ಲಿ ಕೆಲಸ ಮಾಡುತ್ತಲೇ ಪ್ರತಿಸ್ಪರ್ಧಿ ಕಂಪನಿಗಳಿಗೂ ಕೆಲಸ ಮಾಡಿಕೊಡುವುದು ಪ್ರಾಮಾಣಿಕತೆಯನ್ನು ಸಂಪೂರ್ಣವಾಗಿ ಮರೆಯುವುದಕ್ಕೆ ಸಮ’ ಎಂದು ಅವರು ಹೇಳಿದ್ದಾರೆ. ಮೂನ್‌ಲೈಟಿಂಗ್ ಎಂಬುದು ಮೋಸದ ಕೃತ್ಯ ಎಂದು ಪ್ರೇಮ್‌ಜಿ ಈ ಹಿಂದೆ ಟ್ವೀಟ್ ಮಾಡಿದ್ದರು. ಐ.ಟಿ. ಉದ್ಯಮದಲ್ಲಿ ಮೂನ್‌ಲೈಟಿಂಗ್‌ ಈಗ ಚರ್ಚೆಯ ವಸ್ತುವಾಗಿದೆ.

ಐ.ಟಿ. ಸೇವಾ ಕಂಪನಿ ಇನ್ಫೊಸಿಸ್‌ ತನ್ನ ನೌಕರರಿಗೆ ಈಚೆಗೆ, ಮೂನ್‌ಲೈಟಿಂಗ್‌ಗೆ ಅವಕಾಶ ಇಲ್ಲ ಎಂದು ಇ–ಮೇಲ್ ಮೂಲಕ ತಿಳಿಸಿತ್ತು. ಮೂನ್‌ಲೈಟಿಂಗ್ ಎಂಬುದು ಅನೈತಿಕ ಕೆಲಸ ಎಂದು ಐಬಿಎಂ ಹೇಳಿದೆ.

ಮೂನ್‌ಲೈಟಿಂಗ್‌ ಅಂದರೆ ಇನ್ನೊಂದು ಉದ್ಯೋಗವನ್ನು ಗೋಪ್ಯವಾಗಿ ಮಾಡುವುದು ಎಂದು ಅರ್ಥ. ಪಾರದರ್ಶಕವಾಗಿ ಇರಬೇಕು ಎಂದಾದರೆ, ವಾರಾಂತ್ಯದಲ್ಲಿ ತಾವು ಒಂದು ಕೆಲಸ ಮಾಡುತ್ತಿರುವುದಾಗಿ ನೇರವಾಗಿ ಹೇಳಬಹುದು ಎಂದು ಪ್ರೇಮ್‌ಜಿ ವಿವರಿಸಿದ್ದಾರೆ.

‘ಆದರೆ, ವಿಪ್ರೊ ಕಂಪನಿಗಾಗಿ ಕೆಲಸ ಮಾಡುತ್ತಲೇ ಗೋಪ್ಯವಾಗಿ ಪ್ರತಿಸ್ಪರ್ಧಿ ಕಂಪನಿಗೆ ಕೆಲಸ ಮಾಡಲು ಅವಕಾಶವಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.