ADVERTISEMENT

ಲಾಭ ಗಳಿಕೆಗೆ ‘ಎಫ್‌ಪಿಐ’ ಚಿತ್ತ

ತೈಲ ದರ ಏರಿಕೆ, ಹಣದುಬ್ಬರ, ಮಾರುಕಟ್ಟೆ ಮೌಲ್ಯ ಏರಿಕೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2023, 16:02 IST
Last Updated 9 ಸೆಪ್ಟೆಂಬರ್ 2023, 16:02 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಭಾರತದ ಷೇರುಪೇಟೆಗಳಲ್ಲಿ ಆಗಸ್ಟ್‌ನಿಂದ ಈಚೆಗೆ ಷೇರುಗಳನ್ನು ಮಾರಾಟ ಮಾಡುವ ಮೂಲಕ ಲಾಭ ಮಾಡಿಕೊಳ್ಳಲು ಹೆಚ್ಚು ಗಮನ ಹರಿಸಿದ್ದಾರೆ. ಮಾರುಕಟ್ಟೆ ಮೌಲ್ಯ ಗರಿಷ್ಠ ಮಟ್ಟದಲ್ಲಿ ಇರುವುದು, ಕಚ್ಚಾ ತೈಲ ದರ ಏರಿಕೆ, ಹಣದುಬ್ಬರ... ಹೀಗೆ ಹಲವು ಅಂಶಗಳು ಹೂಡಿಕೆ ಚಟುವಟಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿವೆ.

ಮೇ–ಜುಲೈವರೆಗೆ ಸತತ ಮೂರು ತಿಂಗಳು ಷೇರುಪೇಟೆಯಲ್ಲಿ ಬಂಡವಾಳ ಹೂಡಿಕೆಗೆ ಗಮನ ಹರಿಸಿದ್ದ ವಿದೇಶಿ ಹೂಡಿಕೆದಾರರು ಆ ಬಳಿಕ ತಮ್ಮ ಬಳಿ ಇರುವ ಷೇರುಗಳನ್ನು ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದರ ಪರಿಣಾಮವಾಗಿ ಆಸ್ಟ್‌ನಲ್ಲಿ ಹೂಡಿಕೆ ಪ್ರಮಾಣವು ನಾಲ್ಕು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ.

ಆಗಸ್ಟ್‌ನಲ್ಲಿ ಷೇರುಗಳನ್ನು ಖರೀದಿಸುವುದಕ್ಕಿಂತಲೂ ಮಾರಾಟ ಮಾಡಲು ಹೆಚ್ಚು ಆಸಕ್ತಿ ತೋರಿಸಿದ್ದ ವಿದೇಶಿ ಹೂಡಿಕೆದಾರರು ಸೆಪ್ಟೆಂಬರ್‌ನಲ್ಲಿಯೂ ಅದೇ ಪ್ರವೃತ್ತಿ ಮುಂದುವರಿಸುವಂತೆ ಕಾಣುತ್ತಿದೆ. ನ್ಯಾಷನಲ್‌ ಸೆಕ್ಯುರಿಟೀಸ್‌ ಡೆಪಾಸಿಟರಿ ಲಿಮಿಟೆಡ್‌ನಲ್ಲಿ (ಎನ್‌ಎಸ್‌ಡಿಎಲ್‌) ಇರುವ ಮಾಹಿತಿಯ ಪ್ರಕಾರ, ಸೆಪ್ಟೆಂಬರ್‌ 8ರವರೆಗೆ ನಡೆದಿರುವ ವಹಿವಾಟಿನಲ್ಲಿ ₹4,402 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೊಡ್ಡ ಮಟ್ಟದ ಹೂಡಿಕೆ ಒಪ್ಪಂದಗಳು ಮತ್ತು ಪ್ರಾಥಮಿಕ ಮಾರುಕಟ್ಟೆಯ ಮೂಲಕ (ಐಪಿಒ, ಇತ್ಯಾದಿ) ಆಗಿರುವ ಹೂಡಿಕೆಗಳನ್ನು ಹೊರತುಪಡಿಸಿದರೆ ಬಂಡವಾಳ ಮಾರುಕಟ್ಟೆಯಲ್ಲಿ ಒಟ್ಟು ಹೊರಹರಿವು ₹8,832 ಕೋಟಿಯಷ್ಟು ಆಗಲಿದೆ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ADVERTISEMENT

ಅಮೆರಿಕದ ಡಾಲ್‌ ಮೌಲ್ಯ ವೃದ್ಧಿಸುತ್ತಿರುವುದು ಹಾಗೂ ಬಾಂಡ್‌ ಗಳಿಕೆ ಹೆಚ್ಚಾಗುತ್ತಿರುವುದು ಬಂಡವಾಳ ಹೊರಹರಿವಿಗೆ ಕಾರಣವಾಗಿದೆ.  ‘ಡಾಲರ್‌ ಮೌಲ್ಯ ಮತ್ತು ಬಾಂಡ್‌ ಗಳಿಕೆ ಕಡಿಮೆ ಆದರೆ ವಿದೇಶಿ ಬಂಡವಾಳ ಒಳಹರಿವು ಆಗುವ ಸಾಧ್ಯತೆ ಇದೆ. ಆದರೆ, ಇದು ಮುಂಬರುವ ಅಮೆರಿಕದ ಹಣದುಬ್ಬರದ ಸ್ಥಿತಿ ಮತ್ತು ಆರ್ಥಿಕ ಬೆಳವಣಿಗೆಯನ್ನು ಅವಲಂಬಿಸಿರಲಿದೆ’ ಎಂದು ವಿಜಯಕುಮಾರ್‌ ಹೇಳಿದ್ದಾರೆ.

ಬಂಡವಾಳ ಸರಕುಗಳು ಮತ್ತು ವಿದ್ಯುತ್ ವಲಯಗಳಲ್ಲಿ ‘ಎಫ್‌ಪಿಐ’ ನಿರಂತರವಾಗಿ ಹೂಡಿಕೆ ಮಾಡುತ್ತಿದ್ದಾರೆ. ಹಣಕಾಸು ಸಂಸ್ಥೆಗಳಿಗೆ ಸಂಬಂಧಿಸಿದ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಬ್ಯಾಂಕಿಂಗ್ ವಲಯದ ಷೇರುಗಳು ಮೌಲ್ಯ ಕಡಿಮೆ ಮಟ್ಟದಲ್ಲಿ ಇದ್ದು, ರಿಟೇಲ್ ಹೂಡಿಕೆದಾರರಿಗೆ ಖರೀದಿಸಲು ಉತ್ತಮ ಅವಕಾಶ ಇದಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.

ಸೆಪ್ಟೆಂಬರ್‌ 8ಕ್ಕೆ ಕೊನೆಗೊಂಡ ವಾರದ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್‌ ಶೇ 1.34ರಷ್ಟು ಮತ್ತು ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಶೇ 1.97ರಷ್ಟು ಏರಿಕೆ ಕಂಡಿವೆ.

ಎಫ್‌ಪಿಐ ಹೂಡಿಕೆ ವಿವರ (ಕೋಟಿಗಳಲ್ಲಿ)

ಮೇ;₹43,838

ಜೂನ್‌;₹47,148

ಜುಲೈ;₹46,618

ಆಗಸ್ಟ್‌;₹12,262

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.