
ನವದೆಹಲಿ: ‘ಕೇಂದ್ರ ಸರ್ಕಾರ ಪ್ರಾಯೋಜಕತ್ವದ ರೈತ ಉತ್ಪಾದಕ ಸಂಸ್ಥೆಗಳ (ಎಫ್‌ಪಿಒ) ಯೋಜನೆಯನ್ನು ಮತ್ತೆ ಐದು ವರ್ಷ ಕೇಂದ್ರ ಸರ್ಕಾರ ವಿಸ್ತರಿಸಲಿದೆ’ ಎಂದು ಕೇಂದ್ರ ಕೃಷಿ ಸಚಿವಾಲಯದ ಕಾರ್ಯದರ್ಶಿ ದೇವೇಶ್ ಚತುರ್ವೇದಿ ಹೇಳಿದ್ದಾರೆ.
ಸರ್ಕಾರದ ನಿಯಮಗಳ ಪಾಲನೆ ಮತ್ತು ಹಣಕಾಸಿನ ಅಡೆತಡೆಗಳನ್ನು ಪರಿಹರಿಸಲು 2026ರಿಂದ 31ರವರೆಗೆ ಈ ವಿಸ್ತರಣೆ ಮಾಡಲಾಗುತ್ತಿದೆ ಎಂದು ಶುಕ್ರವಾರ ಹೇಳಿದ್ದಾರೆ.
ದೇಶದಲ್ಲಿ 10 ಸಾವಿರ ರೈತ ಉತ್ಪಾದಕ ಸಂಸ್ಥೆಗಳ ರಚನೆಗೆ ಕೇಂದ್ರ ಸರ್ಕಾರವು 2020ರ ಫೆಬ್ರುವರಿಯಲ್ಲಿ ಚಾಲನೆ ನೀಡಿತ್ತು. ಈಗಾಗಲೇ 10 ಸಾವಿರ ಎಫ್‌ಪಿಒ ನೋಂದಣಿ ಆಗಿದ್ದು, ಈ ಪೈಕಿ ಹಲವು ಎಫ್‌ಪಿಒ ಕಳೆದ ಎರಡು ವರ್ಷದಲ್ಲಿ ರಚನೆ ಆಗಿವೆ. ಹೀಗಾಗಿ, ಈ ಸಂಘಗಳ ಸಶಕ್ತಗೊಳಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ರೈತರಿಗೆ ಹೆಚ್ಚಿನ ಪ್ರತಿಫಲ ನೀಡಲು ಸಾಧ್ಯವಾಗುವ ರೀತಿಯಲ್ಲಿ ಎಫ್‌ಪಿಒಗಳನ್ನು ರೂಪಿಸಲಾಗಿದೆ ಎಂದು ಚತುರ್ವೇದಿ ತಿಳಿಸಿದ್ದಾರೆ.
ಕಂಪೆನಿ ಕಾಯ್ದೆ ಅಡಿಯಲ್ಲಿನ ಮಾನದಂಡಗಳನ್ನು ಪಾಲಿಸುವುದೇ ಎಫ್‌ಪಿಒಗೆ ದೊಡ್ಡ ಸವಾಲಾಗಿದೆ. 3ರಿಂದ 5 ವರ್ಷದವರೆಗೆ ದಂಡದಿಂದ ವಿನಾಯಿತಿ ನೀಡುವಂತೆ ಸಂಸದೀಯ ವ್ಯವಹಾರ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
2024–25ರ ಆರ್ಥಿಕ ವರ್ಷದಲ್ಲಿ ಎಫ್‌ಪಿಒ ವಾರ್ಷಿಕ ವಹಿವಾಟು ₹9 ಸಾವಿರ ಕೋಟಿ ಆಗಿದೆ ಎಂದ ಅವರು, ಒಟ್ಟು ವ್ಯವಹಾರ ₹10 ಸಾವಿರ ಕೋಟಿ ದಾಟುವ ಅಂದಾಜಿದೆ. ದೇಶದ 52 ಲಕ್ಷ ರೈತರಿಗೆ ಎಫ್‌ಪಿಒದಿಂದ ಅನುಕೂಲವಾಗಿದೆ ಎಂದು ಹೇಳಿದ್ದಾರೆ.
ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಪ್ರತ್ಯೇಕವಾಗಿ ನೋಂದಾಯಿಸಲಾದ 40 ಸಾವಿರದಿಂದ 50 ಸಾವಿರ ಎಫ್‌ಪಿಒಗಳನ್ನು ಸೇರಿಸಿದರೆ, ಒಟ್ಟು ಎಫ್‌ಪಿಒಗಳ ಸಂಖ್ಯೆಯು ಇನ್ನಷ್ಟು ಹೆಚ್ಚಳವಾಗುತ್ತದೆ.
ಪ್ರಸ್ತುತ, ದೊಡ್ಡ ಗಾತ್ರದ ವಹಿವಾಟು ನಡೆಸಲು ಎಫ್‌ಪಿಒ ಮಿತಿ ₹30 ಲಕ್ಷದಷ್ಟಿದ್ದು, ಇದು ಸಾಕಾಗುವುದಿಲ್ಲ. ಬೆಳೆ ಖರೀದಿ ವೇಳೆ ಅಥವಾ ರೈತರಿಗೆ ಮುಂಗಡ ಪಾವತಿ ಮಾಡುವಾಗ ಇದು ಕನಿಷ್ಠ ₹50 ಲಕ್ಷದಿಂದ ₹1 ಕೋಟಿ ಆಗಿರಬೇಕು ಎಂದು ಹೇಳಿದ್ದಾರೆ.
ಸರ್ಕಾರವು ಎಫ್‌ಪಿಒಗಳಿಗೆ ಸಾಲದ ಗ್ಯಾರಂಟಿ ಅಥವಾ ಹಣಕಾಸಿನ ನೆರವು ಸೌಲಭ್ಯಗಳನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ.
ಏನಿದು ಎಫ್‌ಪಿಒ: ಸಾಮೂಹಿಕ ಕೃಷಿಯನ್ನು ಬೆಂಬಲಿಸುವುದು ಮತ್ತು ಉತ್ತೇಜಿಸುವುದು ಎಫ್‌ಪಿಒ ರಚನೆಯ ಹಿಂದಿನ ಉದ್ದೇಶ. ಈ ಸಂಸ್ಥೆಗಳು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತಂತ್ರಜ್ಞಾನ, ಸಾಲ, ಮಾರುಕಟ್ಟೆಗಳು ಮತ್ತು ಕೃಷಿಗೆ ಸಂಬಂಧಿತ ವಿಷಯಗಳ ಬಗ್ಗೆ ಮಾಹಿತಿಯನ್ನು ಒದಗಿಸುವ ಮೂಲಕ ತಮ್ಮ ಆದಾಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ರೈತ ಉತ್ಪಾದಕ ಸಂಸ್ಥೆಗಳ ಮೇಳಗಳು ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸಲು, ಹೊಸ ತಂತ್ರಜ್ಞಾನಗಳನ್ನು ಅಳವಡಿಸಲು ಮತ್ತು ಪರಸ್ಪರ ಅನುಭವಗಳನ್ನು ಹಂಚಿಕೊಳ್ಳಲು ವೇದಿಕೆಗಳಾಗಿವೆ.
‘ಕೆಲವು ಎಫ್‌ಪಿಒಗಳು ಸರ್ಕಾರದ ಪ್ರಯೋಜನಗಳನ್ನು ಪಡೆಯಲು ಕಾಗದದ ಮೇಲೆ ಮಾತ್ರ ಅಸ್ತಿತ್ವದಲ್ಲಿದ್ದು, ನೈಜ ರೈತರ ಭಾಗವಹಿಸುವಿಕೆ ಇಲ್ಲದೆ ಕೇವಲ 3ರಿಂದ 4 ಜನರನ್ನು ಒಳಗೊಂಡಿವೆ’
ದೇವೇಶ್ ಚತುರ್ವೇದಿ, ಕೇಂದ್ರ ಕೃಷಿ ಸಚಿವಾಲಯದ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.