ಸೇಬು
ಸಾಂದರ್ಭಿಕ ಚಿತ್ರ
ನವದೆಹಲಿ: ಏಷ್ಯಾದ ಅತಿದೊಡ್ಡ ಹಣ್ಣು ಮತ್ತು ತರಕಾರಿಗಳ ಮಾರುಕಟ್ಟೆ ಆಜಾದ್‌ಪುರ ಮಂಡಿ, ಟರ್ಕಿಯಿಂದ ಸೇಬು ಆಮದು ಸ್ಥಗಿತಗೊಳಿಸಲು ನಿರ್ಧರಿಸಿದೆ. ಪ್ರಸ್ತುತ ರಾಜತಾಂತ್ರಿಕ ಪರಿಸ್ಥಿತಿಯನ್ನು ಉಲ್ಲೇಖಿಸಿ ಈ ನಿರ್ಧಾರ ತೆಗೆದುಕೊಂಡಿದೆ.
ಟರ್ಕಿಯಿಂದ ಸೇಬುಗಳ ಆಮದು ಸ್ಥಗಿತಗೊಳಿಸಲು ನಾವು ನಿರ್ಧರಿಸಿದ್ದೇವೆ. ಮೊದಲೇ ಆರ್ಡರ್ ಮಾಡಿದ ಸರಕುಗಳು ಇನ್ನೂ ಬರುತ್ತಿವೆ. ಆದರೆ ಸೇಬುಗಳು ಅಥವಾ ಇತರ ಉತ್ಪನ್ನಗಳ ವ್ಯಾಪಾರ ಇನ್ನು ಮುಂದೆ ನಡೆಯುವುದಿಲ್ಲ ಎಂದು ಆಜಾದ್‌ಪುರ ಮಂಡಿ ಅಧ್ಯಕ್ಷರಾದ ಮೀತಾ ರಾಮ್ ಕೃಪ್ಲಾನಿ ಹೇಳಿದ್ದಾರೆ.
ರಾಜತಾಂತ್ರಿಕ ಪರಿಸ್ಥಿತಿಯ ಹಿನ್ನೆಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಂದೆ ಯಾವುದೇ ಹೊಸ ಆರ್ಡರ್ ಮಾಡುವುದಿಲ್ಲ. ಆಜಾದ್‌ಪುರ ಮಂಡಿ ಬಹಳ ಹಿಂದಿನಿಂದಲೂ ಟರ್ಕಿ ಸೇಬುಗಳಿಗೆ ಆದ್ಯತೆ ನೀಡುತ್ತಿತ್ತು. 2024ರಲ್ಲಿ 1.16 ಲಕ್ಷ ಟನ್ ಸೇಬು ಆಮದು ಮಾಡಿಕೊಳ್ಳಲಾಗಿತ್ತು. ಆದಾಗ್ಯೂ, ಭಾರತದ ಬಗ್ಗೆ ಟರ್ಕಿಯ ಧೋರಣೆ ಮತ್ತು ಇತ್ತೀಚಿನ ಬೆಳವಣಿಗೆ ನಿರಾಶೆಗೆ ಕಾರಣವಾಗಿವೆ ಎಂದು ಅವರು ತಿಳಿಸಿದ್ದಾರೆ.
ಮುಂಬರುವ ತಿಂಗಳುಗಳಲ್ಲಿ ಸೇಬು ಆಮದು ಮಾಡಿಕೊಳ್ಳಲು ಪರ್ಯಾಯ ಪೂರೈಕೆದಾರರನ್ನು ಹುಡುಕಲು ಯೋಜಿಸಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.
ಟರ್ಕಿ ಸರಕುಗಳ ಆಮದು ನಿಷೇಧಿಸಬೇಕೆಂದು ಒತ್ತಾಯಿಸಿ ದೆಹಲಿಯಾದ್ಯಂತ ವ್ಯಾಪಾರಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಭಾರತದ ಬಗ್ಗೆ ಟರ್ಕಿಯ ಇತ್ತೀಚಿನ ರಾಜಕೀಯ ನಿಲುವು ಸ್ವೀಕಾರಾರ್ಹವಲ್ಲ ಮತ್ತು ರಾಷ್ಟ್ರೀಯ ಭಾವನೆಗೆ ನೋವುಂಟು ಮಾಡಿದೆ ದೆಹಲಿ ವ್ಯಾಪಾರಿ ಸಂಘಗಳು ಹೇಳಿವೆ.
ಭಾರತ ವಿರುದ್ಧದ ದಾಳಿಯಲ್ಲಿ ಪಾಕಿಸ್ತಾನ ಬಳಸಿರುವ ಡ್ರೋನ್‌ಗಳನ್ನು ಟರ್ಕಿ ದೇಶವು ಪೂರೈಸಿದೆ. ಅಲ್ಲದೆ, ಪಾಕಿಸ್ತಾನವನ್ನು ಅಜರ್‌ಬೈಜಾನ್ ಬೆಂಬಲಿಸಿದೆ. ಹಾಗಾಗಿ, ಈ ಎರಡು ದೇಶಗಳಿಂದ ಆಮದಾಗುವ ಸರಕುಗಳಿಗೆ ಕೇಂದ್ರ ಸರ್ಕಾರವು ಬಹಿಷ್ಕಾರ ಹೇರಬೇಕು ಎಂದು ವರ್ತಕರ ವಲಯ ಒತ್ತಾಯಿಸಿತ್ತು.
ಜೊತೆಗೆ, ಈ ಎರಡು ದೇಶಗಳ ಪ್ರವಾಸೋದ್ಯಮಕ್ಕೂ ನಿರ್ಬಂಧ ಹೇರಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರುವಾಗಿದೆ. ಮತ್ತೊಂದೆಡೆ ಟರ್ಕಿಯಿಂದ ಭಾರತಕ್ಕೆ ಪ್ರಮುಖವಾಗಿ ಪೂರೈಕೆಯಾಗುವ ಸೇಬು ಮತ್ತು ಅಮೃತ ಶಿಲೆಯನ್ನು (ಮಾರ್ಬಲ್) ವರ್ತಕರ ವಲಯವು ಬಹಿಷ್ಕರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.