ADVERTISEMENT

ತೈಲ ದರ ಏರಿಕೆಯಿಂದ ಹಣದುಬ್ಬರ ಹೆಚ್ಚಳ: ಆರ್‌ಬಿಐ ಕಳವಳ

ಎಂಪಿಸಿ ಸಭೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 1:11 IST
Last Updated 7 ಜೂನ್ 2021, 1:11 IST
ಆರ್‌ಬಿಐ
ಆರ್‌ಬಿಐ   

ಬೆಂಗಳೂರು: ತೈಲ ದರವು ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ದೇಶದಲ್ಲಿ ಹಣದುಬ್ಬರ ಮತ್ತಷ್ಟು ಹೆಚ್ಚಬಹುದು ಎಂಬ ಆತಂಕವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯು (ಎಂಪಿಸಿ) ಈಚಿನ ದಿನಗಳಲ್ಲಿ ವ್ಯಕ್ತಪಡಿಸಿದೆ. ಜೂನ್‌ ಮೊದಲ ವಾರದಲ್ಲಿ ನಡೆದ ಎಂಪಿಸಿ ಸಭೆಯಲ್ಲಿ ಕೂಡ ತೈಲ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕಳವಳ ವ್ಯಕ್ತವಾಗಿದೆ.

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳ ಆಗುತ್ತಿರುವುದು, ಸಾಗಣೆ ವೆಚ್ಚವು ಜಾಸ್ತಿ ಆಗುವುದು ದೇಶದಲ್ಲಿ ಮುಂದೆ ಹಣದುಬ್ಬರ ಹೆಚ್ಚಾಗುವ ಅಪಾಯ ಸೃಷ್ಟಿಸಿವೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸುತ್ತಿರುವ ಎಕ್ಸೈಸ್ ಸುಂಕ, ಸೆಸ್ ಮತ್ತು ತೆರಿಗೆಗಳನ್ನು ಪರಸ್ಪರ ಸಹಕಾರದಿಂದ ಹೊಂದಾಣಿಕೆ ಮಾಡಿ, ತೈಲ ಬೆಲೆ ಏರಿಕೆಯಿಂದ ವಸ್ತುಗಳ ಬೆಲೆ ಏರಿಕೆ ಉಂಟಾಗುವುದನ್ನು ನಿಯಂತ್ರಿಸಬೇಕು’ ಎಂದು ಎಂಪಿಸಿಯ ನಿರ್ಣಯದಲ್ಲಿ ಹೇಳಲಾಗಿದೆ.

ಕೇಂದ್ರ ಸರ್ಕಾರವು ಹಣದುಬ್ಬರವನ್ನು ಶೇಕಡ 4ರ ಮಟ್ಟದಲ್ಲಿ (ಇದರಲ್ಲಿ ಶೇ 2ರಷ್ಟು ಹೆಚ್ಚು ಅಥವಾ ಶೇ 2ರಷ್ಟು ಕಡಿಮೆ ಆಗಬಹುದು) ಇರಿಸುವ ಗುರಿಯನ್ನು ಆರ್‌ಬಿಐಗೆ ನಿಗದಿ ಮಾಡಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇ 5.1ರಷ್ಟು ಇರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ.

ADVERTISEMENT

ಎಂಪಿಸಿ ಸಭೆಯು ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು ಇದೇ ಮೊದಲಲ್ಲ. ಫೆಬ್ರುವರಿ ಮೊದಲ ವಾರದಲ್ಲಿ ನಡೆದ ಸಭೆಯಲ್ಲಿ, ‘ಪೆಟ್ರೋಲ್ ಮತ್ತು ಡೀಸೆಲ್‌ನ ಮಾರುಕಟ್ಟೆ ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನು ತಗ್ಗಿಸುವುದರಿಂದ ಬೆಲೆ ಹೆಚ್ಚಳದ ಒತ್ತಡ ತುಸು ತಗ್ಗಬಹುದು. ಹಣದುಬ್ಬರ ದರವು ಹೆಚ್ಚಿನ ಅವಧಿಗೆ ಕಡಿಮೆ ಮಟ್ಟದಲ್ಲಿ ಇರುವಂತಹ ಪರಿಸ್ಥಿತಿ ಸೃಷ್ಟಿಯಾಗಬೇಕಿರುವುದು ಈ ಸಂದರ್ಭದ ಅಗತ್ಯ’ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

‘ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು 2020ರ ಡಿಸೆಂಬರ್‌ನಲ್ಲಿ ಶೇ 5.5ರ ಮಟ್ಟದಲ್ಲಿದೆ. ಇದಕ್ಕೆ ಒಂದು ಕಾರಣ ಕಚ್ಚಾ ತೈಲದ ಬೆಲೆ ಜಾಸ್ತಿ ಆಗುತ್ತಿರುವುದು ಹಾಗೂ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಪರೋಕ್ಷ ತೆರಿಗೆಗಳು ದೊಡ್ಡ ಪ್ರಮಾಣದಲ್ಲಿ ಇರುವುದು’ ಎಂಬ ಅಭಿಪ್ರಾಯವನ್ನು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಫೆಬ್ರುವರಿಯಲ್ಲಿ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.