ADVERTISEMENT

ಪೆಟ್ರೋಲ್‌, ಡೀಸೆಲ್‌ ಮತ್ತೆ ತುಟ್ಟಿ: ಗ್ರಾಹಕರ ಮೇಲೆ ಇಳಿಯದ ತೆರಿಗೆ ಹೊರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಫೆಬ್ರುವರಿ 2021, 3:32 IST
Last Updated 16 ಫೆಬ್ರುವರಿ 2021, 3:32 IST
ವಾಹನಕ್ಕೆ ಇಂಧನ ಭರ್ತಿ ಮಾಡುತ್ತಿರುವುದು–ಸಾಂದರ್ಭಿಕ ಚಿತ್ರ
ವಾಹನಕ್ಕೆ ಇಂಧನ ಭರ್ತಿ ಮಾಡುತ್ತಿರುವುದು–ಸಾಂದರ್ಭಿಕ ಚಿತ್ರ   

ಬೆಂಗಳೂರು: ಸತತ ಎಂಟನೇ ದಿನವೂ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏಕೆ ಕಂಡಿದ್ದು, ಮಂಗಳವಾರ ದೇಶದಲ್ಲಿ ಇಂಧನ ಬೆಲೆ ಗರಿಷ್ಠ ಮಟ್ಟ ತಲುಪಿದೆ.

ಮುಂಬೈನಲ್ಲಿ ಪೆಟ್ರೋಲ್‌ ದರ 96 ರೂಪಾಯಿ ಸಮೀಪದಲ್ಲಿದೆ. ವಾಣಿಜ್ಯ ನಗರಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ₹95.75, ಡೀಸೆಲ್‌ ಬೆಲೆ ₹86.72 ಮುಟ್ಟಿದೆ. ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ಗೆ 30 ಪೈಸೆ ಹೆಚ್ಚಳವಾಗಿ ₹89.29 ಮತ್ತು ಡೀಸೆಲ್‌ 35 ಪೈಸೆ ಏರಿಕೆಯೊಂದಿಗೆ ₹79.70 ಆಗಿದೆ.

ಬೆಂಗಳೂರಿನಲ್ಲಿ ಇಂದು ಪ್ರತಿ ಲೀಟರ್‌ ಪೆಟ್ರೋಲ್‌ಗೆ ₹92.82 ಹಾಗೂ ಲೀಟರ್‌ ಡೀಸೆಲ್‌ಗೆ ₹84.49 ತೆರಬೇಕಿದೆ.

ADVERTISEMENT

ಫೆಬ್ರುವರಿ 9ರಿಂದ ತೈಲ ಬೆಲೆ ಏರಿಕೆಯಾಗುತ್ತಿದೆ. ಎಂಟು ದಿನಗಳಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ ₹2.34 ಮತ್ತು ಡೀಸೆಲ್‌ ದರ ₹2.57ರಷ್ಟು ಹೆಚ್ಚಳ ಕಂಡಿದೆ.

ನಿರಂತರವಾಗಿ ಇಂಧನ ಬೆಲೆ ಏರಿಕೆಯಾಗುತ್ತಿರುವುದನ್ನು ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳು ಟೀಕಿಸಿದ್ದು, ಕೂಡಲೇ ತೆರಿಗೆ ಕಡಿತಗೊಳಿಸಿ ಜನಸಾಮಾನ್ಯರ ಮೇಲೆ ಹೊರೆಯಾಗುತ್ತಿರುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿವೆ.

ತೈಲ ದರ ಏರಿಕೆ ಕಂಡಿಸಿ ಒಡಿಶಾದಲ್ಲಿ ಸೋಮವಾರ 6 ಗಂಟೆಗಳ ಬಂದ್‌ ನಡೆಸಲಾಯಿತು.

ಇಂಧನ ಬೆಲೆ ಕಡಿತಗೊಳಿಸಲು ತೆರಿಗೆ ಕಡಿಮೆ ಮಾಡುವ ಮಾರ್ಗ ಅನುಸರಿಸುವುದಿಲ್ಲ ಎಂದು ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಕಳೆದ ವಾರ ಸಂಸತ್ತಿನಲ್ಲಿ ಹೇಳಿದ್ದಾರೆ. ಪೆಟ್ರೋಲ್‌ ರಿಟೇಲ್‌ ಮಾರಾಟದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ತೆರಿಗೆಗಳು ಶೇ 61ರಷ್ಟಿದೆ ಹಾಗೂ ಡೀಸೆಲ್‌ ಮೇಲೆ ಶೇ 56ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.