ADVERTISEMENT

ಫ್ಯೂಚರ್–ರಿಲಯನ್ಸ್ ಒಪ್ಪಂದ: ಅಂತಿಮ ಆದೇಶ ನೀಡದಂತೆ ಎನ್‌ಸಿಎಲ್‌ಟಿಗೆ ಸೂಚನೆ

ಪಿಟಿಐ
Published 22 ಫೆಬ್ರುವರಿ 2021, 14:19 IST
Last Updated 22 ಫೆಬ್ರುವರಿ 2021, 14:19 IST

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಜೊತೆ ಫ್ಯೂಚರ್‌ ರಿಟೇಲ್ ಲಿಮಿಟೆಡ್ ಕಂಪನಿಯನ್ನು ವಿಲೀನ ಮಾಡುವ ಪ್ರಕ್ರಿಯೆ ವಿಚಾರದಲ್ಲಿ ಅಂತಿಮ ಆದೇಶ ನೀಡುವಂತೆ ಇಲ್ಲ ಎಂದು ಸುಪ್ರೀಂ ಕೋರ್ಟ್‌, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಗೆ (ಎನ್‌ಸಿಎಲ್‌ಟಿ) ಸೂಚನೆ ನೀಡಿದೆ.

ಅಮೆಜಾನ್ ಕಂಪನಿಯು ದೆಹಲಿ ಹೈಕೋರ್ಟ್ ಆದೇಶವನ್ನು ‍ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ನ್ಯಾಯಮೂರ್ತಿಗಳಾದ ಆರ್.ಎಫ್. ನರಿಮನ್ ಮತ್ತು ಬಿ.ಆರ್. ಗವಾಯಿ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಫ್ಯೂಚರ್ ರಿಟೇಲ್ ಮತ್ತು ಅದರ ಅಧ್ಯಕ್ಷ ಕಿಶೋರ್ ಬಿಯಾನಿ ಅವರಿಗೆ ನೋಟಿಸ್ ಜಾರಿಗೆ ಆದೇಶಿಸಿದೆ. ಅಮೆಜಾನ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.

ಫ್ಯೂಚರ್ – ರಿಲಯನ್ಸ್ ಒಪ್ಪಂದದ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ದೆಹಲಿ ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ಅದೇ ಹೈಕೋರ್ಟ್‌ನ ವಿಭಾಗೀಯ ಪೀಠವು ಫೆಬ್ರುವರಿ 8ರಂದು ತಡೆಯಾಜ್ಞೆ ನೀಡಿದೆ. ಏಕಸದಸ್ಯ ಪೀಠದ ಆದೇಶವನ್ನು ಫ್ಯೂಚರ್ ರಿಟೇಲ್‌ ಕಂಪನಿಯು ಪ್ರಶ್ನಿಸಿತ್ತು.

ADVERTISEMENT

ಫ್ಯೂಚರ್‌ ರಿಟೇಲ್ ಕಂಪನಿಯು ತನ್ನ ಚಿಲ್ಲರೆ ವಹಿವಾಟು, ಸಗಟು ವಹಿವಾಟು, ಸರಕು ಸಾಗಣೆ ಮತ್ತು ಗೋದಾಮು ವಹಿವಾಟುಗಳನ್ನು ರಿಲಯನ್ಸ್‌ಗೆ ಮಾರಾಟ ಮಾಡಲು 2020ರ ಆಗಸ್ಟ್‌ನಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಇದಾದ ನಂತರ, ಫ್ಯೂಚರ್ ಕಂಪನಿಯ ನಡೆ ಪ್ರಶ್ನಿಸಿ ಅಮೆಜಾನ್ ಕಂಪನಿಯು ಸಿಂಗಪುರದ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದ ಮೊರೆ ಹೋಗಿತ್ತು. ಫ್ಯೂಚರ್ ಸಮೂಹವು ತನ್ನ ಜೊತೆ ಮಾಡಿಕೊಂಡ ಒಪ್ಪಂದವೊಂದನ್ನು ಉಲ್ಲಂಘಿಸಿದೆ ಎಂದು ಅಮೆಜಾನ್ ಆರೋಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.