
ನವದೆಹಲಿ: ‘ದೇಶದ ಗಿಗ್ ಆರ್ಥಿಕತೆಯ ನಿಯಂತ್ರಣಗಳನ್ನು ಕಡಿತಗೊಳಿಸಬೇಕಿದೆ. ಇದು ಹೆಚ್ಚಿನ ಜನರನ್ನು ಸಂಘಟಿತ ವಲಯಕ್ಕೆ ಸೇರ್ಪಡೆ ಮಾಡಲಿದೆ’ ಎಂದು ಎಟರ್ನಲ್ ಸ್ಥಾಪಕ ದೀಪಿಂದರ್ ಗೋಯಲ್ ಹೇಳಿದ್ದಾರೆ.
ಗಿಗ್ ಕೆಲಸವು ದೇಶದ ಅತಿದೊಡ್ಡ ಸಂಘಟಿತ ಉದ್ಯೋಗ ಸೃಷ್ಟಿ ಎಂಜಿನ್‌ಗಳಲ್ಲಿ ಒಂದಾಗಿದೆ. ಗಿಗ್ ಕಾರ್ಮಿಕರಿಗೆ ವಿಮೆ, ನ್ಯಾಯಸಮ್ಮತ ಸವಲತ್ತು, ವೇತನವನ್ನು ಒದಗಿಸಲಾಗುತ್ತಿದೆ ಎಂದು ‘ಎಕ್ಸ್’ನಲ್ಲಿ ಹೇಳಿದ್ದಾರೆ.
ಗಿಗ್‌ಗೆ ಹೆಚ್ಚಿನ ನಿಯಂತ್ರಣ ಅಗತ್ಯವಿಲ್ಲ, ಕಡಿಮೆ ನಿಯಂತ್ರಣ ಇದ್ದರೆ ಸಾಕು. ಇದು ಹೆಚ್ಚಿನ ಜನರನ್ನು ಈ ವಲಯಕ್ಕೆ ತರುತ್ತದೆ. ಅವರು ಸ್ವಲ್ಪ ಹಣ ಗಳಿಸಲು, ತಮ್ಮನ್ನು ತಾವು ಕೌಶಲದಿಂದ ಬೆಳೆಸಿಕೊಳ್ಳಲು ಮತ್ತು ನಂತರ ಸಂಘಟಿತ ಕಾರ್ಯಪಡೆಗೆ ಸೇರಲು ಸಾಧ್ಯವಾಗುತ್ತದೆ ಎಂದು ಗೋಯಲ್ ಹೇಳಿದ್ದಾರೆ.
ಗ್ರಾಹಕರ ಮನೆ ಸುತ್ತಲೂ ನಾವು ಅಂಗಡಿಗಳನ್ನು ಹೊಂದಿದ್ದೇವೆ. ಹೀಗಾಗಿ ಆರ್ಡರ್ ಮಾಡಿದ ಸರಕುಗಳನ್ನು 10 ನಿಮಿಷದಲ್ಲಿ ಪೂರೈಸುತ್ತೇವೆ. ಅಷ್ಟೇ ಹೊರತು ಮನೆ ಬಾಗಿಲಿಗೆ ಸರಕುಗಳನ್ನು ಪೂರೈಸುವ ನಮ್ಮ ಡೆಲಿವರಿ ಪಾಲುದಾರನಿಗೆ ವೇಗವಾಗಿ ವಾಹನ ಚಾಲನೆ ಮಾಡುವಂತೆ ಹೇಳಿಲ್ಲ ಎಂದರು.
‘ನೀವು ಬ್ಲಿಂಕಿಟ್‌ನಲ್ಲಿ ಆರ್ಡರ್ ಮಾಡಿದಾಗ, ಆರ್ಡರ್ ಸ್ವೀಕರಿಸಿ, ಪ್ಯಾಕ್ ಮಾಡಲು 2.5 ನಿಮಿಷ ಆಗುತ್ತದೆ. ಬಳಿಕ 8 ನಿಮಿಷದಲ್ಲಿ ಸರಾಸರಿ 2 ಕಿ.ಮೀ ಗಿಂತ ಕಡಿಮೆ ಪ್ರಯಾಣಿಸುತ್ತಾನೆ. ಅಂದರೆ ಮನೆ ಬಾಗಿಲಿಗೆ ಸರಕುಗಳನ್ನು ಪೂರೈಸುವ ನಮ್ಮ ಡೆಲಿವರಿ ಪಾಲುದಾರನು ಗಂಟೆಗೆ 15 ಕಿ.ಮೀ ವೇಗದಲ್ಲಿ ಸಂಚರಿಸಿದ್ದಾನೆ ಎಂದರ್ಥ. ಗ್ರಾಹಕರಿಗೆ ಭರವಸೆ ನೀಡಿದ ಮೂಲ ಸಮಯ ಎಷ್ಟು ಎಂಬುದನ್ನು ಸೂಚಿಸಲು ನಮ್ಮ ಪಾಲುದಾರರು ತಮ್ಮ ಅಪ್ಲಿಕೇಶನ್‌ನಲ್ಲಿ ಟೈಮರ್ ಅನ್ನು ಸಹ ಹೊಂದಿಲ್ಲ ಎಂದು ಹೇಳಿದ ಅವರು ಕಂಪನಿಯು 10 ನಿಮಿಷದಲ್ಲಿ ಸರಕುಗಳನ್ನು ಗ್ರಾಹಕರಿಗೆ ತಲುಪಿಸುವ ಭರವಸೆಯನ್ನು ಹೇಗೆ ಪೂರೈಸುತ್ತವೆ ಎಂಬುದನ್ನು ವಿವರಿಸಿದ್ದಾರೆ.
ಎಟರ್ನಲ್ ಕಂಪನಿಯು ಜೊಮಾಟೊ ಮತ್ತು ಬ್ಲಿಂಕಿಟ್‌ನ ಮಾಲೀಕತ್ವ ಹೊಂದಿದೆ.
ಕಳೆದ ತಿಂಗಳು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವೀಯ ಅವರಿಗೆ ಪತ್ರ ಬರೆದ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಸೇವೆಗಳ ಕಾರ್ಮಿಕರ ಒಕ್ಕೂಟವು (ಜಿಐಪಿಎಸ್‌ಡಬ್ಲ್ಯುಯು) ಕಾರ್ಮಿಕರ ಸುರಕ್ಷತೆಗೆ ಆದ್ಯತೆ ನೀಡಲು 10ರಿಂದ 20 ನಿಮಿಷದಲ್ಲಿ ಗ್ರಾಹಕರಿಗೆ ಸರಕುಗಳನ್ನು ತಲುಪಿಸುವ ಸೇವೆಯನ್ನು ರದ್ದುಪಡಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿತ್ತು.
ಪ್ರಸ್ತುತ ಅಂದಾಜಿನ ಪ್ರಕಾರ ದೇಶದಲ್ಲಿ 1.27 ಕೋಟಿ ಗಿಗ್ ಕಾರ್ಮಿಕರು ಇದ್ದಾರೆ. 2029–30ರ ವೇಳೆಗೆ ಈ ಪ್ರಮಾಣವು 2.35 ಕೋಟಿಗೆ ಹೆಚ್ಚಳವಾಗಲಿದೆ ಎಂದು ನೀತಿ ಆಯೋಗ ಅಂದಾಜಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.