ADVERTISEMENT

₹ 60 ಸಾವಿರ ದಾಟಿದ ಚಿನ್ನ

ವರ್ಷದಲ್ಲಿ 10 ಗ್ರಾಂಗೆ ₹ 10,830ರಷ್ಟು ಏರಿಕೆ

ವಿಶ್ವನಾಥ ಎಸ್.
Published 2 ಫೆಬ್ರುವರಿ 2023, 19:42 IST
Last Updated 2 ಫೆಬ್ರುವರಿ 2023, 19:42 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: 2023ನೇ ಇಸವಿಯ ಆರಂಭದಲ್ಲಿಯೇ ಚಿನ್ನದ ಧಾರಣೆಯು ಬೆಂಗಳೂರಿನಲ್ಲಿ ₹ 60 ಸಾವಿರ ದಾಟಿದೆ. ಗುರುವಾರದ ವಹಿವಾಟಿನಲ್ಲಿ 10 ಗ್ರಾಂ ಚಿನ್ನವು ₹ 60,370ರಂತೆ ಮಾರಾಟವಾಗಿದೆ.

ಜಾಗತಿಕ ಬಿಕ್ಕಟ್ಟಿನಿಂದಾಗಿ 2023ರಲ್ಲಿ ಹೂಡಿಕೆದಾರರು ಹಣವನ್ನು ಹೆಚ್ಚು ಸುರಕ್ಷಿತವಾದ ಕಡೆಗಳಲ್ಲಿ ತೊಡಗಿಸಲು ಮುಂದಾಗಲಿದ್ದಾರೆ. ಇದರಿಂದಾಗಿ ಚಿನ್ನದ ಧಾರಣೆಯು ಈ ವರ್ಷದಲ್ಲಿ 10 ಗ್ರಾಂಗೆ ₹ 60 ಸಾವಿರವನ್ನು ತಲುಪುವ ಸಾಧ್ಯತೆ
ಇದೆ ಎಂದು ಮಾರುಕಟ್ಟೆ ತಜ್ಞರು 2022ರ ಕೊನೆಯಲ್ಲಿ ಅಂದಾಜು ಮಾಡಿದ್ದರು.

ಈ ವರ್ಷದ ಆರಂಭದಿಂದಲೇ ಚಿನ್ನದ ದರ ಏರಿಕೆ ಹಾದಿಯಲ್ಲಿದೆ. ಜನವರಿ 2ರಂದು 10 ಗ್ರಾಂಗೆ ₹ 56,750 ಇದ್ದ ಚಿನ್ನದ ದರವು ಫೆಬ್ರುವರಿ 2ರ ವೇಳೆಗೆ ₹ 60,370ಕ್ಕೆ ಏರಿಕೆ ಆಗಿದೆ. ಅಂದರೆ 10 ಗ್ರಾಂಗೆ ₹ 3,620ರಷ್ಟು ಏರಿಕೆ ಆಗಿದೆ.

ADVERTISEMENT

ಒಂದು ವರ್ಷದ ಅವಧಿಯನ್ನು ಗಮನಿಸುವುದಾದರೆ, ಬೆಂಗಳೂರಿನಲ್ಲಿ ಕಳೆದ ವರ್ಷದ ಫೆಬ್ರುವರಿ
2ರಂದು 10 ಗ್ರಾಂ ಚಿನ್ನದ ದರ₹ 49,540ರಷ್ಟು ಇತ್ತು. ಅಂದರೆ, ಒಂದು ವರ್ಷದಲ್ಲಿ ₹ 10,830ರಷ್ಟು ಏರಿಕೆ ಆಗಿದೆ.

‘ಜಾಗತಿಕ ಸಂದಿಗ್ಧ ಪರಿಸ್ಥಿತಿಯ ಕಾರಣದಿಂದಾಗಿ ವಿವಿಧ ಕೇಂದ್ರೀಯ ಬ್ಯಾಂಕ್‌ಗಳು ಹೆಚ್ಚಿನ ಪ್ರಮಾಣ
ದಲ್ಲಿ ಚಿನ್ನ ಖರೀದಿಸುತ್ತಿವೆ. ಇದರ ಜೊತೆಗೆ ಭಾರತದಲ್ಲಿ ರೂಪಾಯಿ ಮೌಲ್ಯ ಇಳಿಕೆ ಕಾಣುತ್ತಿರುವುದರಿಂದ, ಆಮದು ವೆಚ್ಚ ಹೆಚ್ಚಾಗಿ ಚಿನ್ನದ ದರ ಹೆಚ್ಚಾಗುತ್ತಿದೆ’ ಎಂದು ಬೆಂಗಳೂರು ಚಿನ್ನಾಭರಣ ವರ್ತಕರ ಸಂಘದ ಮಾಜಿ ಅಧ್ಯಕ್ಷ ವೆಂಕಟೇಶ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

ಈಗಿನ ಪರಿಸ್ಥಿತಿ ಮುಂದುವರಿದರೆ ಚಿನ್ನದ ದರವು 10 ಗ್ರಾಂಗೆ ₹ 62 ಸಾವಿರದಿಂದ ₹ 63 ಸಾವಿರದವರೆಗೂ ಏರಿಕೆ ಆಗಬಹುದು. ದೀರ್ಘಾವಧಿಯಲ್ಲಿ ₹ 68 ಸಾವಿರಕ್ಕೆ ಏರಿಕೆ ಕಾಣುವ ಸಾಧ್ಯತೆಯೂ ಇದೆ. ಜನ ಒಂದೊಮ್ಮೆ ಚಿನ್ನವನ್ನು ಮಾರಿ ಲಾಭ ಗಳಿಸಿಕೊಳ್ಳುವ ಮನಸ್ಸು ಮಾಡಿದರೆ ದರ ತುಸು ಇಳಿಕೆಯಾಗುವ ಸಂಭವ ಇರುತ್ತದೆ ಎಂದು ಅವರು ತಿಳಿಸಿದರು.

ಹಣದುಬ್ಬರ, ಹಣಕಾಸು ಮಾರುಕಟ್ಟೆಯಲ್ಲಿ ಇರುವ ಅಪಾಯಗಳಿಂದಾಗಿ ಚಿನ್ನದ ಗಟ್ಟಿ ಮತ್ತು ನಾಣ್ಯಗಳಿಗೆ ಹೆಚ್ಚು ಬೇಡಿಕೆ ಇರಲಿದೆ. ಚಿನ್ನದ ವಿನಿಮಯ ವಹಿವಾಟು ನಿಧಿ (ಇಟಿಎಫ್‌) ಮತ್ತೆ ಚೇತರಿಕೆ ಕಂಡುಕೊಳ್ಳುವ ನಿರೀಕ್ಷೆ ಇದೆ ಎಂದು ಎಂದು ಕೋಟಕ್‌ ಸೆಕ್ಯುರಿಟೀಸ್‌ನ ಉಪಾಧ್ಯಕ್ಷ ರವೀಂದ್ರ ವಿ. ರಾವ್ ಈಚೆಗಷ್ಟೇ ಹೇಳಿದ್ದರು.

ಜಿಗಿದ ಬೆಳ್ಳಿ ದರ: ಬೆಳ್ಳಿ ಧಾರಣೆ ಗುರುವಾರ ಕೆ.ಜಿಗೆ ₹73,100ಕ್ಕೆ ಜಿಗಿದಿದೆ.

ಜನವರಿ 2ರಿಂದ ಫೆಬ್ರುವರಿ 2ರವರೆಗಿನ ಅವಧಿಯಲ್ಲಿ ಬೆಳ್ಳಿ ದರ ಕೆ.ಜಿಗೆ ₹ 2,800ರಷ್ಟು ಹೆಚ್ಚಾಗಿದೆ. ಒಂದು ವರ್ಷದ ಅವಧಿಯಲ್ಲಿ ಕೆ.ಜಿಗೆ ₹ 6,800ರಷ್ಟು ಏರಿಕೆ
ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.