
ಹೂಡಿಕೆ
(ಐಸ್ಟೋಕ್ ಪ್ರಾತಿನಿಧಿಕ ಚಿತ್ರ)
ನವದೆಹಲಿ: ನಮ್ಮ ಸರ್ಕಾರ ಚಿನ್ನದ ಗಣಿಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಭಾರತೀಯರಿಗೆ ಐದು ವರ್ಷಗಳ ತೆರಿಗೆ ವಿನಾಯಿತಿ ನೀಡಲಿದೆ ಎಂದು ಅಫ್ಗಾನಿಸ್ತಾನದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಅಲ್ಹಾಜ್ ನೂರುದ್ದೀನ್ ಅಜೀಜಿ ತಿಳಿಸಿದ್ದಾರೆ.
ಅಸೋಚಾಮ್ ಆಯೋಜಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನದೊಂದಿಗಿನ ಉದ್ವಿಗ್ನತೆಯು ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದ್ದಾರೆ.
‘ಅಫ್ಗಾನಿಸ್ತಾನದಲ್ಲಿ ಹೂಡಿಕೆ ಮಾಡುವುದಕ್ಕೆ ಉತ್ತಮ ವಾತಾವರಣವಿದ್ದು, ನಿಮಗೆ ಅಗತ್ಯವಿರುವಷ್ಟು ಭೂಮಿಯನ್ನು ನೀಡುವುದಕ್ಕೆ ನಾವು ಸಿದ್ಧರಿದ್ದೇವೆ. ಚಿನ್ನದ ಗಣಿಗಾರಿಕೆ ಸೇರಿದಂತೆ ಹೊಸ ವಲಯಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವವರಿಗೆ ಐದು ವರ್ಷಗಳ ತೆರಿಗೆ ವಿನಾಯಿತಿ ನೀಡುತ್ತೇವೆ’ ಎಂದು ಅಲ್ಹಾಜ್ ತಿಳಿಸಿದ್ದಾರೆ.
ಭಾರತೀಯ ಕಂಪನಿಗಳು ಹೂಡಿಕೆಗಾಗಿ ಯಂತ್ರೋಪಕರಣಗಳನ್ನು ಆಮದು ಮಾಡಿಕೊಳ್ಳುವುದಾದರೆ ನಾವು ಕೇವಲ ಶೇ 1ರಷ್ಟು ಸುಂಕವನ್ನು ವಿಧಿಸುತ್ತೇವೆ ಎಂದೂ ಅಲ್ಹಾಜ್ ವಿವರಿಸಿದ್ದಾರೆ.
‘ಚಿನ್ನದ ಗಣಿಗಾರಿಕೆಗೆ ತಾಂತ್ರಿಕ ಮತ್ತು ವೃತ್ತಿಪರ ಕಂಪನಿಗಳು ಬೇಕಾಗುತ್ತವೆ. ಆದ್ದರಿಂದ ಹೂಡಿಕೆ ಮಾಡುವುದಕ್ಕೂ ಮುನ್ನ ನಿಮ್ಮ ತಂಡವನ್ನು ನಮ್ಮ ದೇಶಕ್ಕೆ ಕಳುಹಿಸಿ. ಸಂಶೋಧನೆ ನಡೆಸಿದ ಬಳಿಕ ನೀವು ಹೂಡಿಕೆ ಮಾಡಬಹುದು ಎಂದು ಅವರು ಹೇಳಿದ್ದಾರೆ.
‘ಭಾರತ ಮತ್ತು ಅಫ್ಗಾನಿಸ್ತಾನದ ನಡುವೆ ಉತ್ತಮ ಬಾಂಧವ್ಯ ವೃದ್ಧಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತಿದ್ದೇವೆ. ವೀಸಾ, ಏರ್ ಕಾರಿಡಾರ್, ಬ್ಯಾಂಕಿಂಗ್ ವಹಿವಾಟುಗಳಂತಹ ಒಟ್ಟಾರೆ ಪ್ರಕ್ರಿಯೆಯ ಮೇಲೆ ನಿಜವಾಗಿಯೂ ಪರಿಣಾಮ ಬೀರುವ ಕೆಲವು ಸಣ್ಣ ಅಡಚಣೆಗಳಿವೆ. ಆದ್ದರಿಂದ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ಸುಧಾರಿಸಲು ಗಮನ ಹರಿಸುತ್ತಿದ್ದೇವೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.