ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ 10 ಗ್ರಾಂಗೆ ₹1 ಲಕ್ಷ ದಾಟಿ ಚಾರಿತ್ರಿಕ ದಾಖಲೆ ಬರೆದಿದ್ದ ಚಿನ್ನದ ದರವು, ಬುಧವಾರದ ವಹಿವಾಟಿನಲ್ಲಿ ದಿಢೀರ್ ಇಳಿಕೆ ಕಂಡಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ದರ ಇಳಿಕೆಯಾಗಿದೆ. ಹಾಗಾಗಿ, ದೇಶೀಯ ಮಾರುಕಟ್ಟೆಯಲ್ಲೂ ಬೆಲೆ ಇಳಿದಿದೆ ಎಂದು ತಜ್ಞರು ಹೇಳಿದ್ದಾರೆ.
10 ಗ್ರಾಂ ಚಿನ್ನದ ದರವು (ಶೇ 99.9 ಪರಿಶುದ್ಧತೆ) ₹2,400 ಇಳಿಕೆಯಾಗಿ, ₹99,200ರಂತೆ ಮಾರಾಟವಾಗಿದೆ. ಆಭರಣ ಚಿನ್ನದ (ಶೇ 99.5 ಪರಿಶುದ್ಧತೆ) ಬೆಲೆಯು ₹3,400 ಕಡಿಮೆಯಾಗಿದ್ದು, ₹98,700 ಆಗಿದೆ.
ಬೆಳ್ಳಿ ಧಾರಣೆ ಕೆ.ಜಿಗೆ ₹700 ಏರಿಕೆಯಾಗಿ, ₹99,200 ಆಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
‘ಚೀನಾದ ಸರಕುಗಳ ಮೇಲೆ ಅಮೆರಿಕವು ಅತಿಹೆಚ್ಚು ಸುಂಕ ವಿಧಿಸಿದ ಸಂದರ್ಭದಲ್ಲಿ ಚಿನ್ನದ ಬೆಲೆಯು ಏರಿಕೆ ಕಂಡಿತ್ತು. ಇದರಿಂದ ಜಾಗತಿಕ ವ್ಯಾಪಾರ ಸಮರ ಶುರುವಾಗಿತ್ತು. ಟ್ರಂಪ್ ಆಡಳಿತವು ಚೀನಾ ಮೇಲೆ ಹೇರಿದ್ದ ಸುಂಕದ ಪ್ರಮಾಣವನ್ನು ತಗ್ಗಿಸುವ ಬಗ್ಗೆ ಸುಳಿವು ನೀಡಿದೆ. ಇದರಿಂದ ಹಳದಿ ಲೋಹದ ಬೆಲೆ ಇಳಿಕೆಯಾಗಿದೆ’ ಎಂದು ಅಬಾನ್ಸ್ ಫೈನಾನ್ಶಿಯಲ್ ಸರ್ವಿಸಸ್‌ನ ಸಿಇಒ ಚೇತನ್ ಮೆಹ್ತಾ ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲೂ ಇಳಿಕೆ
ಜಾಗತಿಕ ಮಾರುಕಟ್ಟೆಯಲ್ಲಿಯೂ ಹಳದಿ ಲೋಹದ ಬೆಲೆ ಇಳಿಕೆಯಾಗಿದೆ. ಮಂಗಳವಾರದ ವಹಿವಾಟಿನಲ್ಲಿ ಪ್ರತಿ ಔನ್ಸ್ (28.34 ಗ್ರಾಂ) ಚಿನ್ನದ ದರ 3500 ಡಾಲರ್‌ಗೆ (₹2.98 ಲಕ್ಷ) ತಲುಪಿ ಸಾರ್ವಕಾಲಿಕ ದಾಖಲೆ ಬರೆದಿತ್ತು. ಬುಧವಾರದ ವಹಿವಾಟಿನ ಅಂತ್ಯಕ್ಕೆ 3316 ಡಾಲರ್‌ಗೆ (₹2.83 ಲಕ್ಷ) ಇಳಿದಿದೆ. ಪ್ರತಿ ಸುಂಕ ನೀತಿಯು ಹಣದುಬ್ಬರ ಏರಿಕೆಗೆ ಕಾರಣವಾಗಲಿದೆ. ಜೊತೆಗೆ ಅಮೆರಿಕದ ಆರ್ಥಿಕತೆ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದೆ ಎಂದು ಅಲ್ಲಿನ ಕೇಂದ್ರೀಯ ಬ್ಯಾಂಕ್ ಆದ ಫೆಡರಲ್ ರಿಸರ್ವ್‌ನ ಗವರ್ನರ್ ಜೆರೋಮ್ ಪೊವೆಲ್ ಹೇಳಿದ್ದರು. ಈ ನಡುವೆ ಟ್ರಂಪ್ ಆಡಳಿತವು ಪೊವೆಲ್ ಅವರನ್ನು ಗವರ್ನರ್ ಹುದ್ದೆಯಿಂದ ಕೆಳಗಿಳಿಸಲಿದೆ ಎಂದು ಹೇಳಲಾಗಿತ್ತು. ಆದರೆ ಅಂತಹ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಹಾಗಾಗಿ ಜಾಗತಿಕ ಮಟ್ಟದಲ್ಲಿ ಚಿನ್ನದ ಧಾರಣೆ ಇಳಿಮುಖವಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.