ADVERTISEMENT

ಚಿನ್ನದ ಬೆಲೆ ದಾಖಲೆ ಮಟ್ಟಕ್ಕೆ

ಪಿಟಿಐ
Published 30 ಜನವರಿ 2019, 20:00 IST
Last Updated 30 ಜನವರಿ 2019, 20:00 IST
ಚಿನ್ನ
ಚಿನ್ನ   

ಮುಂಬೈ: ಇಲ್ಲಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ಏರುಗತಿಯಲ್ಲಿದ್ದು, 10 ಗ್ರಾಂ ಚಿನ್ನದ ಬೆಲೆ ₹ 33 ಸಾವಿರದ ಗಡಿ ಸಮೀಪಿಸಿದೆ.

ಬುಧವಾರದ ವಹಿವಾಟಿನಲ್ಲಿ ಸ್ಟ್ಯಾಂಡರ್ಡ್‌ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹ 32,985 ಮತ್ತು ಅಪರಂಜಿ ಚಿನ್ನದ ಬೆಲೆ ₹ 33,110ಕ್ಕೆ ತಲುಪಿದೆ. ಶೇ 3ರಷ್ಟು ಜಿಎಸ್‌ಟಿ ಸೇರಿದಂತೆ ಚಿನ್ನದ ಬೆಲೆ ₹ 33 ಸಾವಿರದ ಗಡಿ ದಾಟಿ ದಿನದಿಂದ ದಿನಕ್ಕೆ ಹೊಸ ದಾಖಲೆ ಬರೆಯುತ್ತಿದೆ.

ದೆಹಲಿ ಮಾರುಕಟ್ಟೆಯಲ್ಲಿ ₹ 320ರಂತೆ ಹೆಚ್ಚಳವಾಗಿ ಕ್ರಮವಾಗಿ ₹ 33,920 ಮತ್ತು ₹ 34,070ಕ್ಕೆ ತಲುಪಿದೆ.

ADVERTISEMENT

ಜಾಗತಿಕ ಮಾರುಕಟ್ಟೆಯಲ್ಲಿ ಅದರಲ್ಲೂ ವಿಶೇಷವಾಗಿ ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳಿಂದ ಖರೀದಿ, ಚಿನ್ನದ ಗಣಿಗಾರಿಕೆಯಲ್ಲಿನ ಇಳಿಕೆ, ಅಮೆರಿಕ ಮತ್ತು ಚೀನಾದ ವಾಣಿಜ್ಯ ಮಾತುಕತೆಯ ಅನಿಶ್ಚಿತತೆ ಹಾಗೂ ಚೀನಾದ ದೂರಸಂಪರ್ಕ ದೈತ್ಯ ಸಂಸ್ಥೆ ಹುವಾಯ್‌ ವಿರುದ್ಧ ಅಮೆರಿಕೆಯು ಕ್ರಿಮಿನಲ್‌ ಕ್ರಮ ಕೈಗೊಳ್ಳಲು ಮುಂದಾಗಿರುವ ಕಾರಣಕ್ಕೆ ಸುರಕ್ಷಿತ ಹೂಡಿಕೆಯ ಸ್ವರ್ಗವಾಗಿರುವ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತಿದೆ.

ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಬೆಲೆಯು ನಿರಂತರವಾಗಿ ಏರುಗತಿಯಲ್ಲಿ ಇದೆ. ಕರೆನ್ಸಿ ಕೊರತೆ ಎದುರಿಸುತ್ತಿರುವ ಟರ್ಕಿ, ರಷ್ಯಾ ಒಳಗೊಂಡಂತೆ ಅನೇಕ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳೂ ಚಿನ್ನ ಖರೀದಿಗೆ ಹೆಚ್ಚಿನ ಒಲವು ತೋರುತ್ತಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಈ ಎಲ್ಲ ಬೆಳವಣಿಗೆಗಳು ದೇಶಿ ಮಾರುಕಟ್ಟೆಯಲ್ಲಿ ಪ್ರತಿಫಲನಗೊಳ್ಳುತ್ತಿದೆ.

ಔನ್ಸ್‌ ಬೆಲೆ: ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಔನ್ಸ್‌ (28.349 ಗ್ರಾಂ) ಚಿನ್ನದ ಬೆಲೆ 1,314.76 ಡಾಲರ್‌ಗೆ (ಅಂದಾಜು ₹ 92,033) ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.