ನವದೆಹಲಿ: ಚಿನ್ನದ ಬೆಲೆಯು ಏರುಗತಿಯಲ್ಲಿ ಇದೆ. ಇದಕ್ಕೆ ಕಾರಣಗಳು ಹಲವು ಎನ್ನುತ್ತಿದ್ದಾರೆ ಮಾರುಕಟ್ಟೆ ತಜ್ಞರು. ಜಾಗತಿಕ ಮಟ್ಟದ ಅನಿಶ್ಚಿತತೆಗಳು, ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ ಬಿಕ್ಕಟ್ಟುಗಳು, ಕರೆನ್ಸಿ ಮೌಲ್ಯದಲ್ಲಿನ ಏರಿಳಿತಗಳು ಹಾಗೂ ಕೇಂದ್ರೀಯ ಬ್ಯಾಂಕ್‌ಗಳು ಚಿನ್ನವನ್ನು ಖರೀದಿಸುತ್ತಿರುವುದು ಚಿನ್ನದ ಬೆಲೆಯನ್ನು ಏರುಮುಖಿಯಾಗಿ ಇರಿಸಲಿವೆ. ಮಧ್ಯಮಾವಧಿಯಲ್ಲಂತೂ ಪರಿಸ್ಥಿತಿ ಹೀಗೇ ಇರಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಜುಲೈ 28ರಂದು 10 ಗ್ರಾಂ ಚಿನ್ನದ ದರವು ₹98,079 ಇತ್ತು. ಅದು ಈಗ ₹1,02,250ಕ್ಕೆ ಏರಿಕೆಯಾಗಿದೆ. ಹಳದಿ ಲೋಹದ ಬೆಲೆಯಲ್ಲಿನ ನಿರಂತರ ಏರಿಕೆಯು ಹೂಡಿಕೆದಾರರ ಸಂಪತ್ತನ್ನು ಹೆಚ್ಚಿಸುತ್ತಲೇ ಇದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜುಲೈ 30ರಂದು ಒಂದು ಔನ್ಸ್ (28.34 ಗ್ರಾಂ) ಚಿನ್ನದ ದರವು 3,268 ಡಾಲರ್ (₹2,86,205) ಇತ್ತು. ಆಗಸ್ಟ್ 8ರ ವೇಳೆಗೆ ಇದು 3,534 ಡಾಲರ್‌ಗೆ (₹3,09,510) ಏರಿಕೆಯಾಗಿದೆ.
ಜಾಗತಿಕವಾಗಿ ಗೋಜಲುಗಳನ್ನು ಸೃಷ್ಟಿಸಿರುವ ಸುಂಕಗಳು ಈ ಏರಿಕೆಗೆ ಕಾರಣ. ಇದು ಇನ್ನಷ್ಟು ಹೆಚ್ಚಳ ಕಂಡರೆ ಚಿನ್ನದ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತೀ ಔನ್ಸ್‌ಗೆ 3,800 ಡಾಲರ್ (₹3,32,797) ಆಗಬಹುದು. ಆರ್ಥಿಕ ಅನಿಶ್ಚಿತತೆಗಳು ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರು ಚಿನ್ನದ ಮೇಲೆ ಹೆಚ್ಚಿನ ಮೊತ್ತ ತೊಡಗಿಸುವಂತೆ ಮಾಡಿವೆ.ಪ್ರಥಮೇಶ್ ಮಲ್ಯ, ಡೆಪ್ಯುಟಿ ಉಪಾಧ್ಯಕ್ಷ, ಕೃಷಿಯೇತರ ಸರಕುಗಳು ಮತ್ತು ಕರೆನ್ಸಿಗಳ ಸಂಶೋಧನಾ ವಿಭಾಗ, ಏಂಜಲ್ ಒನ್
ವಿವಿಧ ಕೇಂದ್ರೀಯ ಬ್ಯಾಂಕ್‌ಗಳು ಚಿನ್ನದ ಸಂಗ್ರಹವನ್ನು ತಮ್ಮ ಮೀಸಲಿನಲ್ಲಿ ಹೆಚ್ಚಿಸಿಕೊಳ್ಳುವುದನ್ನು ಮುಂದುವರಿಸಲಿವೆ ಎಂದು ಹೂಡಿಕೆದಾರರು ಭಾವಿಸಿದ್ದಾರೆ. ಈಗಿನ ಅನಿಶ್ಚಿತ ಆರ್ಥಿಕ ಪರಿಸ್ಥಿತಿ ಹಾಗೂ ಅಮೆರಿಕದ ಡಾಲರ್‌ನ ಆಚೆಗೂ ನೋಟ ಹರಿಸುವ ಯತ್ನವು ಮುಂದುವರಿದಿರುವ ಈ ಹೊತ್ತಿನಲ್ಲಿ ಈ ನಂಬಿಕೆ ಹೀಗೇ ಇರಲಿದೆ. ಅಮೆರಿಕದ ಬೆಳವಣಿಗೆ ದರ ಹಾಗೂ ಅಲ್ಲಿನ ಹಣದುಬ್ಬರ ಪ್ರಮಾಣವು ಇನ್ನಷ್ಟು ಬಿಗಡಾಯಿಸಿರುವ ಕಾರಣಕ್ಕೆ ಚಿನ್ನದ ದರವು ದಾಖಲೆ ಮಟ್ಟದಲ್ಲಿ ಮುಂದುವರಿದಿದೆ... ಅಮೆರಿಕವು 1ಕೆ.ಜಿ ಹಾಗೂ 100 ಔನ್ಸ್‌ನ ಚಿನ್ನದ ಗಟ್ಟಿಗಳ ಮೇಲೆ ವಿಧಿಸಿರುವ ಪ್ರತಿಸುಂಕ, ಫೆಡರಲ್ ರಿಸರ್ವ್‌ನ ಸ್ವಾತಂತ್ರ್ಯದ ಬಗ್ಗೆ ಮೂಡಿರುವ ಕಳವಳವು ಹೂಡಿಕೆದಾರರು ಚಿನ್ನವನ್ನು ಹೆಚ್ಚೆಚ್ಚು ಬಯಸುವಂತೆ ಮಾಡಿವೆ.ಎನ್. ಆರ್. ರಾಮಸ್ವಾಮಿ, ಮುಖ್ಯಸ್ಥರು, ಸರಕುಗಳು ಮತ್ತು ಸಿಆರ್‌ಎಂ, ವೆಂಚುರಾ ಸೆಕ್ಯುರಿಟೀಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.