ADVERTISEMENT

ಸ್ವಯಂ ನಿಯಂತ್ರಣ: ಗೂಗಲ್ ಅಸಮ್ಮತಿ

ರಾಯಿಟರ್ಸ್
Published 11 ಆಗಸ್ಟ್ 2022, 14:24 IST
Last Updated 11 ಆಗಸ್ಟ್ 2022, 14:24 IST

ನವದೆಹಲಿ: ದೇಶದ ಸಾಮಾಜಿಕ ಜಾಲತಾಣಗಳಿಗೆ ಅನ್ವಯವಾಗುವ ಸ್ವಯಂ ನಿಯಂತ್ರಣ ವ್ಯವಸ್ಥೆ ರಚಿಸುವುದಕ್ಕೆ ಗೂಗಲ್ ಅಸಮ್ಮತಿ ಸೂಚಿಸಿದೆ. ಆದರೆ ಈ ಪ್ರಸ್ತಾವಕ್ಕೆ ಫೇಸ್‌ಬುಕ್‌, ಟ್ವಿಟರ್‌ ಬೆಂಬಲ ವ್ಯಕ್ತಪಡಿಸಿವೆ.

ಸಾಮಾಜಿಕ ಜಾಲತಾಣಗಳಲ್ಲಿನ ವಸ್ತು–ವಿಷಯಗಳ ಬಗ್ಗೆ ಬಳಕೆದಾರರಿಂದ ಬರುವ ದೂರುಗಳನ್ನು ಆಲಿಸಲು ಸರ್ಕಾರಿ ವ್ಯವಸ್ಥೆಯೊಂದನ್ನು ರೂಪಿಸುವ ಬಗ್ಗೆ ಕೇಂದ್ರ ಸರ್ಕಾರವು ಜೂನ್‌ ತಿಂಗಳಲ್ಲಿ ಪ್ರಸ್ತಾವ ಸಿದ್ಧಪಡಿಸಿತ್ತು. ಸಾಮಾಜಿಕ ಜಾಲತಾಣ ಕಂಪನಿಗಳು ತಾವೇ ಮುಂದಾಗಿ ಸ್ವಯಂ ನಿಯಂತ್ರಣ ಜಾರಿಗೆ ತರುವುದಾದಲ್ಲಿ ಅದಕ್ಕೆ ತಾನು ಮುಕ್ತವಾಗಿರುವುದಾಗಿ ಹೇಳಿತ್ತು.

ಕಳೆದ ವಾರ ನಡೆದ ಸಭೆಯಲ್ಲಿ ಗೂಗಲ್ ಪ್ರತಿನಿಧಿಯು, ಸ್ವಯಂ ನಿಯಂತ್ರಣ ವ್ಯವಸ್ಥೆಯ ಬಗ್ಗೆ ತಮ್ಮ ಕಂಪನಿಗೆ ಸಮಾಧಾನ ಇಲ್ಲ ಎಂದು ಹೇಳಿರುವುದಾಗಿ ಗೊತ್ತಾಗಿದೆ. ಸ್ವಯಂ ನಿಯಂತ್ರಣ ವ್ಯವಸ್ಥೆಯಲ್ಲಿ ಬಾಹ್ಯ ವ್ಯಕ್ತಿಗಳು ಇರುತ್ತಾರೆ. ಆಗ ತಾನು ತನ್ನ ನಿಯಮಗಳಿಗೆ ವಿರುದ್ಧವಾದ ವಸ್ತು–ವಿಷಯಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದರೂ, ಅದನ್ನು ಮರುಪ್ರಕಟಿಸುವಂತೆ ಸ್ವಯಂ ನಿಯಂತ್ರಣ ವ್ಯವಸ್ಥೆಯು ಒತ್ತಡ ತರಬಹುದು ಎಂಬ ಆಕ್ಷೇಪವನ್ನು ಗೂಗಲ್ ವ್ಯಕ್ತಪಡಿಸಿದೆ.

ADVERTISEMENT

ಸ್ವಯಂ ನಿಯಂತ್ರಣ ವ್ಯವಸ್ಥೆಯು ಈ ಬಗೆಯಲ್ಲಿ ಒತ್ತಡ ತರಲು ಶುರುಮಾಡಿದರೆ, ಅದು ಅಪಾಯಕಾರಿ ಪೂರ್ವನಿದರ್ಶನ ಆಗಬಹುದು ಎಂದು ಪ್ರತಿನಿಧಿ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.