ADVERTISEMENT

ಎ.ಐ: ಗೂಗಲ್‌ನಿಂದ ಲಕ್ಷ ಕೋಟಿ ಹೂಡಿಕೆ

ಪಿಟಿಐ
Published 14 ಅಕ್ಟೋಬರ್ 2025, 16:21 IST
Last Updated 14 ಅಕ್ಟೋಬರ್ 2025, 16:21 IST
   

ನವದೆಹಲಿ: ಕೃತಕ ಬುದ್ಧಿಮತ್ತೆ (ಎ.ಐ) ಮೂಲಸೌಕರ್ಯ ಕೇಂದ್ರ ನಿರ್ಮಾಣಕ್ಕಾಗಿ ಆಂಧ್ರಪ್ರದೇಶದಲ್ಲಿ ಒಟ್ಟು 15 ಬಿಲಿಯನ್‌ ಡಾಲರ್‌ (ಸರಿಸುಮಾರು ₹1.33 ಲಕ್ಷ ಕೋಟಿ) ಹೂಡಿಕೆ ಮಾಡುವುದಾಗಿ ಗೂಗಲ್‌ ಕಂಪನಿಯು ಮಂಗಳವಾರ ತಿಳಿಸಿದೆ. ಇದು ಈ ಕಂಪನಿಯು ಭಾರತದಲ್ಲಿ ಮಾಡಲಿರುವ ಅತಿದೊಡ್ಡ ಹೂಡಿಕೆ.

ಎ.ಐ. ಮೂಲಸೌಕರ್ಯ ಕೇಂದ್ರವು ಅದಾನಿ ಸಮೂಹದ ಪಾಲುದಾರಿಕೆಯಲ್ಲಿ ಗಿಗಾವಾಟ್‌ ಗಾತ್ರದ ದತ್ತಾಂಶ ಕೇಂದ್ರವೊಂದನ್ನು ನಿರ್ಮಾಣ ಮಾಡುವುದನ್ನು ಕೂಡ ಒಳಗೊಂಡಿದೆ. ಈ ಯೋಜನೆಯು ಆಂಧ್ರಪ್ರದೇಶದಲ್ಲಿ ನೇರವಾಗಿ ಆರು ಸಾವಿರ ಉದ್ಯೋಗಗಳನ್ನು, ಪರೋಕ್ಷವಾಗಿ ಒಟ್ಟು 30 ಸಾವಿರ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆ ಇದೆ.

ಇದು ಅಮೆರಿಕದ ಆಚೆಗೆ ಗೂಗಲ್ ಕಂಪನಿಯು ನಿರ್ಮಿಸಲಿರುವ ಅತಿದೊಡ್ಡ ಎ.ಐ. ಕೇಂದ್ರವಾಗಲಿದೆ. ವಿಶಾಖಪಟ್ಟಣದಲ್ಲಿ ಇದು ತಲೆ ಎತ್ತಲಿದೆ. ಈ ದತ್ತಾಂಶ ಕೇಂದ್ರಕ್ಕೆ ಪರಿಸರ ಪೂರಕ ಇಂಧನದ ಪೂರೈಕೆ ಇರಲಿದೆ. ಉದ್ಯಮಿ ಗೌತಮ್ ಅದಾನಿ ಒಡೆತನದ ಅದಾನಿ ಕನೆಕ್ಸ್‌ ಈ ಯೋಜನೆಗಾಗಿ ಗೂಗಲ್ ಜೊತೆ ಪಾಲುದಾರಿಕೆ ಮಾಡಿಕೊಳ್ಳಲಿದೆ.

ADVERTISEMENT

ಈ ಯೋಜನೆಯಲ್ಲಿ ಭಾರ್ತಿ ಏರ್‌ಟೆಲ್‌ ಕೂಡ ಕೈಜೋಡಿಸಲಿದೆ. ₹1.33 ಲಕ್ಷ ಕೋಟಿಯನ್ನು ಮುಂದಿನ ಐದು ವರ್ಷಗಳಲ್ಲಿ ತೊಡಗಿಸಲಾಗುತ್ತದೆ. ಮುಂಬೈ ಮಹಾನಗರಕ್ಕೆ ವರ್ಷವೊಂದಕ್ಕೆ ಬೇಕಾಗುವಷ್ಟು ವಿದ್ಯುತ್ತಿನ ಶೇಕಡ 50ರಷ್ಟನ್ನು ಈ ದತ್ತಾಂಶ ಕೇಂದ್ರ ಬಳಸಲಿದೆ! ಈ ಕೇಂದ್ರಕ್ಕೆ ಅದಾನಿ ಸಮೂಹದಿಂದ ಪರಿಸರ ಪೂರಕ ಇಂಧನದ ಪೂರೈಕೆ ಆಗುವ ಸಾಧ್ಯತೆ ಇದೆ.

‘ಈ ಹೂಡಿಕೆಯು ವಿಕಸಿತ ಭಾರತ ನಿರ್ಮಿಸುವ ನಮ್ಮ ದೂರದೃಷ್ಟಿಗೆ ಅನುಗುಣವಾಗಿ ಇದೆ. ಇದು ತಂತ್ರಜ್ಞಾನವನ್ನು ಎಲ್ಲರಿಗೂ ಲಭ್ಯವಾಗಿಸುವಲ್ಲಿ ಬಲಿಷ್ಠ ಶಕ್ತಿಯಾಗಿ ನೆರವಿಗೆ ಬರಲಿದೆ. ಎ.ಐ. ಎಲ್ಲರಿಗೂ ಲಭ್ಯವಾಗುವಂತೆ ಇದು ಮಾಡಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.