ADVERTISEMENT

ಕಚ್ಚಾತೈಲ ಭೂಗತ ಸಂಗ್ರಹಾಗಾರ ಭರ್ತಿಗೆ ಕೇಂದ್ರ ಸರ್ಕಾರ ಯೋಚನೆ

ಮಂಗಳೂರಿನ ಎನ್‌ಎಂಪಿಟಿ ತಲುಪಿದ ಮೊದಲ ಕಂತಿನ 10 ಲಕ್ಷ ಬ್ಯಾರಲ್‌

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 22:11 IST
Last Updated 19 ಏಪ್ರಿಲ್ 2020, 22:11 IST
ಉಡುಪಿಯ ಪಾದೂರಿನಲ್ಲಿ ಇರುವ ಕಚ್ಚಾತೈಲ ಸಂಗ್ರಹಾಗಾರ
ಉಡುಪಿಯ ಪಾದೂರಿನಲ್ಲಿ ಇರುವ ಕಚ್ಚಾತೈಲ ಸಂಗ್ರಹಾಗಾರ   

ಮಂಗಳೂರು: ಕೊರೊನಾ ಸೋಂಕಿನ ವಿರುದ್ಧದ ಹೋರಾಟದ ಮಧ್ಯೆ ದೇಶದಲ್ಲಿ ಇಂಧನ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು ನಿರ್ಧರಿಸಿರುವ ಕೇಂದ್ರ ಪೆಟ್ರೋಲಿಯಂ ಸಚಿವಾಲಯ, ಮೇ ಮೊದಲ ವಾರದಲ್ಲಿ ದೇಶದ ಭೂಗತ ಕಚ್ಚಾತೈಲ ಸಂಗ್ರಹಾಗಾರಗ
ಳನ್ನು ಭರ್ತಿ ಮಾಡಲು ಮುಂದಾಗಿದೆ.

ಜಾಗತಿಕವಾಗಿ ಸದ್ಯಕ್ಕೆ ತೈಲ ಬೆಲೆ ಕುಸಿದಿದ್ದು, ಈ ಸಂದರ್ಭದಲ್ಲಿಯೇ ಲಭ್ಯ ವಿರುವ ಕಚ್ಚಾತೈಲವನ್ನು ಸಂಗ್ರಹಾಗಾರಗ ಳಲ್ಲಿ ಭರ್ತಿ ಮಾಡಲಾಗುತ್ತಿದೆ ಎಂದು ಸಚಿವಾಲಯ ಟ್ವೀಟ್‌ ಮಾಡಿದೆ.

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳಿಗೆ ಮಾರುಕಟ್ಟೆಯಿಂದ ಅಗ್ಗದ ದರದಲ್ಲಿ ತೈಲವನ್ನು ಖರೀದಿಸಲಾಗುತ್ತಿದ್ದು, ರಾಜ್ಯದ ಮಂಗಳೂರು, ಉಡುಪಿಯ ಪಾದೂರು ಹಾಗೂ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ತೈಲ ಸಂಗ್ರಹಾಗಾರಗಳನ್ನು ಭರ್ತಿ ಮಾಡಲಾಗುತ್ತಿದೆ.

ADVERTISEMENT

ಈಗಾಗಲೇ 10 ಲಕ್ಷ ಬ್ಯಾರಲ್ (1.42 ಲಕ್ಷ ಟನ್‌) ಕಚ್ಚಾತೈಲವನ್ನು ಹೊತ್ತ ಮೊದಲ ಹಡಗು ಈ ವಾರದ ಆರಂಭದಲ್ಲಿ ಯುಎಇಯಿಂದ ಬಂದಿದ್ದು, ಇಲ್ಲಿನ ಎನ್‌ಎಂಪಿಟಿ ತಲುಪಿದೆ.

ಈ ಕಚ್ಚಾತೈಲವನ್ನು ನಗರದ ಪೆರ್ಮುದೆಯಲ್ಲಿರುವ ಕಚ್ಚಾತೈಲ ಸಂಗ್ರಹಾಗಾರದಲ್ಲಿ ಶೇಖರಿಸಲಾಗಿದೆ.ಮಂಗಳೂರಿನ ಪೆರ್ಮುದೆಯ ತೈಲ ಸಂಗ್ರಹಾಗಾರದಲ್ಲಿ 15 ಲಕ್ಷ ಟನ್‌ (1.10 ಕೋಟಿ ಬ್ಯಾರಲ್‌) ಹಾಗೂ ಪಾದೂರು ಸಂಗ್ರಹಾಗಾರದಲ್ಲಿ 25 ಲಕ್ಷ ಟನ್‌ (1.83 ಕೋಟಿ ಬ್ಯಾರಲ್‌) ಕಚ್ಚಾತೈಲ ಸಂಗ್ರಹಿಸಬಹುದಾಗಿದೆ.

‘ಕೋವಿಡ್ -19 ಸವಾಲಿನ ಮಧ್ಯೆ ಭಾರತದ ಇಂಧನ ಸುರಕ್ಷತೆಯನ್ನು ಕಾಪಾಡಲು ಹೆಚ್ಚಿನ ಮುತುವರ್ಜಿ ವಹಿಸಲಾಗಿದ್ದು, ಮಂಗಳೂರು ಮತ್ತು ಪಾದೂರು ತೈಲ ಸಂಗ್ರಹಾಗಾರಗಳನ್ನು ಸಂಪೂರ್ಣವಾಗಿ ತುಂಬಲು, ಕಡಿಮೆ ಬೆಲೆಗೆ ಖರೀದಿಸಿದ ಕಚ್ಚಾತೈಲವನ್ನು ಹೊತ್ತ ಹಡಗುಗಳು ಸಾಲುಗಟ್ಟಿ ನಿಂತಿವೆ’ ಎಂದು ಪೆಟ್ರೋಲಿಯಂ ಸಚಿವಾಲಯ ಟ್ವೀಟ್‌ನಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.