ADVERTISEMENT

ಬ್ಯಾಂಕುಗಳಿಗೆ ಸರ್ಕಾರದ ನೆರವು ಅನುಮಾನ

ಪಿಟಿಐ
Published 16 ಆಗಸ್ಟ್ 2020, 14:57 IST
Last Updated 16 ಆಗಸ್ಟ್ 2020, 14:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸಾಲ ಮರುಹೊಂದಾಣಿಕೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅವಕಾಶ ಕಲ್ಪಿಸಿರುವ ಕಾರಣ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಸರ್ಕಾರದ ಕಡೆಯಿಂದ ಹೊಸದಾಗಿ ಹಣಕಾಸಿನ ನೆರವು ಬೇಕಾಗಲಿಕ್ಕಿಲ್ಲ. ಸಾಲ ಪಡೆಯುತ್ತಿರುವವರ ಪ್ರಮಾಣ ಕೋವಿಡ್–19 ಸಾಂಕ್ರಾಮಿಕದ ಪರಿಣಾಮವಾಗಿ ಕಡಿಮೆಯಾಗಿದ್ದು, ಇದು ಕೂಡ ಸರ್ಕಾರದ ನೆರವಿನ ಅಗತ್ಯವನ್ನು ಇಲ್ಲವಾಗಿಸಿದೆ ಎಂದು ಮೂಲಗಳು ಹೇಳಿವೆ.

ಸಾಲ ಮರುಪಾವತಿ ಕಂತುಗಳ ಪಾವತಿಯನ್ನು ಮುಂದೂಡುವ ಆಯ್ಕೆಯು ಆಗಸ್ಟ್‌ ಕೊನೆಗೆ ಮುಕ್ತಾಯವಾಗಲಿದ್ದು, ಅದರ ನಂತರವೂ ಬ್ಯಾಂಕ್‌ಗಳ ಎನ್‌ಪಿಎ ಪ್ರಮಾಣದಲ್ಲಿ ದಿಢೀರ್ ಹೆಚ್ಚಳ ಆಗಲಿಕ್ಕಿಲ್ಲ. ಸಾಲ ಮರುಹೊಂದಾಣಿಕೆ ಸೌಲಭ್ಯವು ಬ್ಯಾಂಕ್‌ಗಳ ನೆರವಿಗೆ ಬರಲಿದೆ. ಸಾಲ ಮರುಹೊಂದಾಣಿಕೆಯ ಉದ್ದೇಶಕ್ಕೆ ಕೂಡ ಹೆಚ್ಚಿನ ಮೊತ್ತವನ್ನು ತೆಗೆದಿರಿಸಬೇಕಾದ ಅಗತ್ಯ ಎದುರಾಗಲಿಕ್ಕಿಲ್ಲ ಎಂದು ಅಂದಾಜಿಸಲಾಗಿದೆ.

ಇಷ್ಟೆಲ್ಲ ಇದ್ದರೂ, ಸರ್ಕಾರಿ ಸ್ವಾಮ್ಯದ ಯಾವುದಾದರೂ ಬ್ಯಾಂಕ್‌ಗೆ ಹಣಕಾಸು ವರ್ಷದ ಕೊನೆಯಲ್ಲಿ ಹಣದ ಅಗತ್ಯ ಎದುರಾದಲ್ಲಿ, ಸರ್ಕಾರವು ಅದನ್ನು ನೀಡಲಿದೆ ಎಂದು ಮೂಲಗಳು ಹೇಳಿವೆ. 2019–20ರಲ್ಲಿ ಕೇಂದ್ರ ಸರ್ಕಾರವು, ಒಟ್ಟು ₹ 70 ಸಾವಿರ ಕೋಟಿಯನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಪುನರ್ಧನವಾಗಿ ನೀಡಿತ್ತು.

ADVERTISEMENT

ಆದರೆ, 2020–21ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರವು, ಬ್ಯಾಂಕ್‌ಗಳಿಗೆ ಯಾವುದೇ ಹಣಕಾಸಿನ ನೆರವು ಪ್ರಕಟಿಸಿರಲಿಲ್ಲ. ತಮ್ಮ ಅಗತ್ಯಕ್ಕೆ ಬೇಕಿರುವ ಹಣವನ್ನು ಬ್ಯಾಂಕುಗಳು ಮಾರುಕಟ್ಟೆಯಿಂದ ಸಂಗ್ರಹಿಸಿಕೊಳ್ಳಲಿವೆ ಎಂದು ಸರ್ಕಾರ ಆಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.