ADVERTISEMENT

ಉದ್ಯಮದ ಪುನರ್‌ ರಚನೆ l ಬ್ಯಾಂಕುಗಳ ಖಾಸಗೀಕರಣ?

ಷೇರು ಮಾರಾಟಕ್ಕೂ ಕೇಂದ್ರದ ಯೋಜನೆ

ರಾಯಿಟರ್ಸ್
Published 20 ಜುಲೈ 2020, 19:53 IST
Last Updated 20 ಜುಲೈ 2020, 19:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ/ಮುಂಬೈ:ಕೇಂದ್ರ ಸರ್ಕಾರವು ತನ್ನ ಮಾಲೀಕತ್ವದಲ್ಲಿರುವ ಬ್ಯಾಂಕ್‌ಗಳ ಪೈಕಿ ಅರ್ಧಕ್ಕಿಂತ ಹೆಚ್ಚಿನ ಪ್ರಮಾಣದ ಬ್ಯಾಂಕ್‌ಗಳನ್ನು ಖಾಸಗಿಯವರಿಗೆ ಒಪ್ಪಿಸುವ ಆಲೋಚನೆಯಲ್ಲಿ ಇದೆ. ಬ್ಯಾಂಕಿಂಗ್ ಉದ್ಯಮದ ಪುನರ್‌ರಚನೆ ಪ್ರಕ್ರಿಯೆಯ ಭಾಗವಾಗಿ ಐದು ಬ್ಯಾಂಕ್‌ಗಳನ್ನು ಮಾತ್ರ ತನ್ನ ಅಧೀನದಲ್ಲಿ ಉಳಿಸಿಕೊಳ್ಳುವ ಉದ್ದೇಶ ಹೊಂದಿದೆ.

ಈ ಯೋಜನೆಯ ಮೊದಲ ಭಾಗವಾಗಿ, ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಯುಕೊ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್‌ಗಳಲ್ಲಿನ ಷೇರುಗಳನ್ನು ಮಾರಾಟ ಮಾಡಿ, ಆ ಮೂಲಕ ಈ ಬ್ಯಾಂಕ್‌ಗಳನ್ನು ಖಾಸಗಿಯವರಿಗೆ ಒಪ್ಪಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಸರ್ಕಾರದ ಅಧೀನದಲ್ಲಿ ನಾಲ್ಕರಿಂದ ಐದು ಬ್ಯಾಂಕುಗಳನ್ನು ಉಳಿಸಿಕೊಳ್ಳುವ ಆಲೋಚನೆ ಇದೆ’ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಈಗ ದೇಶದಲ್ಲಿನ 12 ಬ್ಯಾಂಕುಗಳು ಸರ್ಕಾರದ ಅಧೀನದಲ್ಲಿವೆ. ಸರ್ಕಾರವು ಹೊಸ ಖಾಸಗೀಕರಣ ಪ್ರಸ್ತಾವನೆ ಸಿದ್ಧಪಡಿಸುತ್ತಿದ್ದು, ಬ್ಯಾಂಕುಗಳ ಷೇರು ಮಾರಾಟಕ್ಕೆ ಸಂಬಂಧಿಸಿದ ಯೋಜನೆಯನ್ನು ಅದರಲ್ಲಿ ವಿವರಿಸಲಾಗುತ್ತದೆ. ಇದನ್ನು ಕೇಂದ್ರ ಸಂಪುಟದ ಮುಂದೆ ತರಲಾಗುತ್ತದೆ ಎಂದು ಅವರು ಹೇಳಿದರು.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಕೇಂದ್ರ ಹಣಕಾಸು ಸಚಿವಾಲಯ ನಿರಾಕರಿಸಿದೆ.

ಪ್ರಮುಖವಲ್ಲದ ಕಂಪನಿಗಳಲ್ಲಿ ಹಾಗೂ ವಲಯಗಳಲ್ಲಿ ತಾನು ಹೊಂದಿರುವ ಆಸ್ತಿಗಳನ್ನು ಮಾರಾಟ ಮಾಡಿ, ಆದಾಯ ಸಂಗ್ರಹಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಭಾರತದಲ್ಲಿ ಸರ್ಕಾರದ ಮಾಲೀಕತ್ವದಲ್ಲಿ ಐದಕ್ಕಿಂತ ಹೆಚ್ಚು ಬ್ಯಾಂಕುಗಳು ಇರಬಾರದು ಎಂದು ಸರ್ಕಾರದ ಹಲವು ಸಮಿತಿಗಳು ಹಾಗೂ ಭಾರತೀಯ ರಿಸರ್ವ್‌ ಬ್ಯಾಂಕ್‌ ಶಿಫಾರಸು ಮಾಡಿವೆ.

‘ಇನ್ನು ಮುಂದೆ ಬ್ಯಾಂಕುಗಳ ವಿಲೀನ ಇರುವುದಿಲ್ಲ ಎಂದು ಸರ್ಕಾರ ಈಗಾಗಲೇ ಹೇಳಿದೆ. ಹಾಗಾಗಿ, ಉಳಿದಿರುವ ಆಯ್ಕೆ ಷೇರುಗಳ ಮಾರಾಟ ಮಾತ್ರ’ ಎಂದು ರಾಷ್ಟ್ರೀಕೃತ ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಈಗ ನಾವು ವಿಲೀನ ಆಗಿರದ ಬ್ಯಾಂಕುಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಆಲೋಚನೆ ಹೊಂದಿದ್ದೇವೆ’ ಎಂದು ಸರ್ಕಾರದ ಅಧಿಕಾರಿ ತಿಳಿಸಿದರು. ಹಿಂದಿನ ವರ್ಷ ಕೇಂದ್ರ ಸರ್ಕಾರವು ಒಟ್ಟು ಹತ್ತು ರಾಷ್ಟ್ರೀಕೃತ ಬ್ಯಾಂಕು
ಗಳನ್ನು ನಾಲ್ಕು ಬ್ಯಾಂಕುಗಳನ್ನಾಗಿ
ವಿಲೀನಗೊಳಿಸಿತ್ತು.

ಕೊರೊನಾ ವೈರಾಣು ಸೃಷ್ಟಿಸಿದ ಬಿಕ್ಕಟ್ಟಿನ ಪರಿಣಾಮವಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಬ್ಯಾಂಕುಗಳ ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣದಲ್ಲಿ ಹೆಚ್ಚಳ ಆಗುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿಯೇ ಸರ್ಕಾರವು ಬ್ಯಾಂಕುಗಳ ಖಾಸಗೀಕರಣದ ಯೋಜನೆ ಸಿದ್ಧಪಡಿಸುತ್ತಿದೆ.

‘ಮಾರುಕಟ್ಟೆ ಪರಿಸ್ಥಿತಿಯು ಪೂರಕವಾಗಿ ಇಲ್ಲದ ಕಾರಣ ಷೇರು ಮಾರಾಟವು ಈ ಹಣಕಾಸು ವರ್ಷದಲ್ಲಿ ಸಾಧ್ಯವಾಗಲಿಕ್ಕಿಲ್ಲ’ ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.

2019ರ ಸೆಪ್ಟೆಂಬರ್‌ ಅಂತ್ಯದ ವೇಳೆಗೆ ಭಾರತದ ಬ್ಯಾಂಕುಗಳಲ್ಲಿ ವಸೂಲಾಗದ ಸಾಲದ ಮೊತ್ತವು ₹ 9.35 ಲಕ್ಷ ಕೋಟಿ ಆಗಿತ್ತು.

ರಾಷ್ಟ್ರೀಕರಣಕ್ಕೆ 51 ವರ್ಷ

ದೇಶದಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣ ಆಗಿ ಭಾನುವಾರಕ್ಕೆ (ಜುಲೈ 19) 51 ವರ್ಷಗಳು ತುಂಬಿವೆ. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ, 1969ರಲ್ಲಿ ಸುಗ್ರೀವಾಜ್ಞೆಯ ಮೂಲಕ 14 ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲಾಗಿತ್ತು.

‘ಸಾಲ ಅನುಪಾತ ಹೆಚ್ಚಳ’

ಮುಂಬೈ: ಕೋವಿಡ್‌-19 ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಹೆಚ್ಚುವರಿ ಸಾಲ ಪಡೆದಿದೆ. ಹೀಗಾಗಿ ‌ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಮತ್ತು ಸಾಲದ ಅನುಪಾತವು ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಶೇಕಡ 87.6ಕ್ಕೆ ಏರಿಕೆಯಾಗಲಿದೆ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ನ (ಎಸ್‌ಬಿಐ) ಆರ್ಥಿಕ ತಜ್ಞರು ಹೇಳಿದ್ದಾರೆ.

2019–20ನೇ ಹಣಕಾಸು ವರ್ಷದಲ್ಲಿ ಈ ಅನುಪಾತವು ಶೇಕಡ 72.2ರಷ್ಟಿತ್ತು. ಇವೆರಡರ ಮಧ್ಯದ ಅನುಪಾತದಲ್ಲಿ ಶೇಕಡ 4ಕ್ಕಿಂತ ಹೆಚ್ಚು ಏರಿಕೆಯಾಗುವುದಕ್ಕೆ ಕಾರಣ, ಬೆಳವಣಿಗೆ ದರದ‌ಲ್ಲಿ ಆಗಿರುವ ಕುಸಿತ ಎನ್ನಬಹುದು. ಸಾಂಪ್ರದಾಯಿಕ ನೆಲೆಯಲ್ಲಿ ವಿತ್ತೀಯ ನಿರ್ವಹಣೆ ಮಾಡುವ ಬದಲಾಗಿ ಬೆಳವಣಿಗೆಗೆ ಪೂರಕವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ಕಾಯ್ದೆ–2003ರ (ಎಫ್‌ಆರ್‌ಬಿಎಂ ಕಾಯ್ದೆ 2003) ಗುರಿಯ ಪ್ರಕಾರ, ಜಿಡಿಪಿಯ
ಶೇಕಡ 60ರಷ್ಟಕ್ಕೆ ಒಟ್ಟು ಸಾಲದ ಮೊತ್ತವನ್ನು ಮಿತಿಗೊಳಿಸಬೇಕು. ಈ ಗುರಿ ತಲುಪುವುದು 2030ನೆಯ ಹಣಕಾಸಿನ ವರ್ಷದಲ್ಲಿ ಸಾಧ್ಯವಾಗಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.