ADVERTISEMENT

ಬ್ಯಾಂಕ್ ಖಾಸಗೀಕರಣಕ್ಕೆ ಆರ್‌ಬಿಐ, ಸರ್ಕಾರ ಜೊತೆಯಾಗಿ ಕೆಲಸ: ನಿರ್ಮಲಾ ಸೀತಾರಾಮನ್

ಪಿಟಿಐ
Published 7 ಫೆಬ್ರುವರಿ 2021, 15:26 IST
Last Updated 7 ಫೆಬ್ರುವರಿ 2021, 15:26 IST
ನಿರ್ಮಲಾ ಸೀತಾರಾಮನ್‌
ನಿರ್ಮಲಾ ಸೀತಾರಾಮನ್‌    

ಮುಂಬೈ: ಬಜೆಟ್‌ನಲ್ಲಿ ಪ್ರಕಟಿಸಿರುವ, ಬ್ಯಾಂಕುಗಳ ಖಾಸಗೀಕರಣ ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಜೊತೆ ಸೇರಿ ಕೆಲಸ ಮಾಡಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಕೇಂದ್ರ ಸರ್ಕಾರದ ಬಂಡವಾಳ ಹಿಂತೆಗೆತ ಯೋಜನೆಯ ಭಾಗವಾಗಿ ಎರಡು ಬ್ಯಾಂಕ್‌ಗಳನ್ನು ಖಾಸಗಿಯವರಿಗೆ ಒಪ್ಪಿಸುವ ಯೋಜನೆಯನ್ನು ಕಳೆದ ವಾರ ಮಂಡಿಸಿದ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಈ ಘೋಷಣೆಯನ್ನು ಬ್ಯಾಂಕ್‌ ನೌಕರರ ಒಕ್ಕೂಟಗಳು ವಿರೋಧಿಸಿವೆ.

‘ಖಾಸಗೀಕರಣದ ವಿವರಗಳನ್ನು ಸಿದ್ಧಪಡಿಸಲಾಗುತ್ತಿದೆ. ಘೋಷಣೆ ಮಾಡಿದ್ದು ನಾನಾದರೂ, ನಾವು ಆರ್‌ಬಿಐ ಜೊತೆ ಸೇರಿ ಕೆಲಸ ಮಾಡುತ್ತಿದ್ದೇವೆ’ ಎಂದು ನಿರ್ಮಲಾ ಅವರು, ಖಾಸಗೀಕರಣ ಪ್ರಸ್ತಾವದ ಬಗ್ಗೆ ಪ್ರಶ್ನಿಸಿದಾಗ ಹೇಳಿದರು.

ADVERTISEMENT

ಯಾವ ಬ್ಯಾಂಕನ್ನು ಖಾಸಗಿಯವರಿಗೆ ಒಪ್ಪಿಸಲಾಗುತ್ತದೆ ಎಂಬ ವಿವರ ನೀಡಲು ಅವರು ನಿರಾಕರಿಸಿದರು. ‘ಅದರ ವಿವರ ಪ್ರಕಟಿಸಲು ಸರ್ಕಾರ ಸಿದ್ಧವಾದಾಗ ನಿಮಗೆ ಮಾಹಿತಿ ನೀಡಲಾಗುತ್ತದೆ’ ಎಂದರು.

ಬ್ಯಾಂಕ್‌ಗಳಲ್ಲಿನ ವಸೂಲಾಗದ ಸಾಲದ (ಎನ್‌ಪಿಎ) ಸಮಸ್ಯೆ ಇತ್ಯರ್ಥಪಡಿಸಲು ರಚಿಸಲಾಗುವ ರಾಷ್ಟ್ರೀಯ ಆಸ್ತಿ ಪುನರ್‌ರಚನಾ ಕಂಪನಿಗೆ (ಎಆರ್‌ಸಿ ಅಥವಾ ಬ್ಯಾಡ್‌ ಬ್ಯಾಂಕ್) ಸರ್ಕಾರದ ಕಡೆಯಿಂದ ಒಂದಿಷ್ಟು ಖಾತರಿಗಳನ್ನು ನೀಡಬೇಕಾಗುತ್ತದೆ ಎಂದು ನಿರ್ಮಲಾ ಹೇಳಿದರು. ಎನ್‌ಪಿಎ ಸಮಸ್ಯೆ ನಿಭಾಯಿಸಲು ಬ್ಯಾಡ್ ಬ್ಯಾಂಕ್ ಶುರುಮಾಡುವ ಸೂತ್ರವು ಬ್ಯಾಂಕ್‌ಗಳ ಕಡೆಯಿಂದಲೇ ಬಂದಿದೆ. ಎಆರ್‌ಸಿಯನ್ನು ಬ್ಯಾಂಕ್‌ಗಳೇ ಮುನ್ನಡೆಸಲಿವೆ ಎಂದರು.

ಎಆರ್‌ಸಿಗೆ ವರ್ಗಾವಣೆ ಆಗಲಿರುವ ವಸೂಲಾಗದ ಸಾಲಗಳು ಹಿಂದೆ ಇರಿಸಿದ ತಪ್ಪು ಹೆಜ್ಜೆಗಳ ಫಲ ಎಂದು ದೂರಿದರು. ಬ್ಯಾಂಕ್‌ಗಳಲ್ಲಿ ವೃತ್ತಿಪರತೆಯನ್ನು ಹೆಚ್ಚಿಸುವ ಅಗತ್ಯ ಇದೆ, ಸರ್ಕಾರ ಕೂಡ ಅದೇ ಕೆಲಸ ಮಾಡಲು ಯತ್ನಿಸುತ್ತಿದೆ ಎಂದರು.

ಬಜೆಟ್‌ನಲ್ಲಿ ಹೊಸದಾಗಿ ಘೋಷಿಸಲಾಗಿರುವ ಕೃಷಿ ಮೂಲಸೌಕರ್ಯ ಸೆಸ್‌ ಮೂಲಕ ಕೇಂದ್ರ ಸರ್ಕಾರವು ₹ 30 ಸಾವಿರ ಕೋಟಿ ಗಳಿಸಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.