ನವದೆಹಲಿ: ‘2025–26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ದೇಶದಲ್ಲಿ ದಾಖಲೆಯ ಪ್ರಮಾಣದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಾಗುವ ನಿರೀಕ್ಷೆ ಇದೆ’ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸೋಮವಾರ ಹೇಳಿದ್ದಾರೆ.
ದೇಶದಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಅಂದಾಜಿದೆ. ಇದು ಉತ್ಪಾದನೆ ಹೆಚ್ಚಳಕ್ಕೆ ಸಹಕಾರಿಯಾಗಲಿದೆ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸಚಿವರು ಹೇಳಿದ್ದಾರೆ.
ನಕಲಿ ಹಾಗೂ ಕಳಪೆ ಗುಣಮಟ್ಟದ ಕೀಟನಾಶಕಗಳ ಮಾರಾಟವನ್ನು ನಿಯಂತ್ರಿಸಲು ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಅವರು ಹೇಳಿದರು. ರಸಗೊಬ್ಬರದ ಸಮತೋಲಿತ ಬಳಕೆಯನ್ನು ಖಾತರಿಪಡಿಸಲು ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಬೇಕು ಎಂದರು.
2024–25ರ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯ ಮೂರನೇ ಅಂದಾಜಿನ ಪ್ರಕಾರ, ದೇಶದಲ್ಲಿ 16.80 ಕೋಟಿ ಟನ್ ಆಹಾರ ಧಾನ್ಯ ಉತ್ಪಾದನೆ ಆಗಲಿದೆ. 2014–15ರ ನಂತರದಲ್ಲಿ ಹೋಲಿಸಿದರೆ ಉತ್ಪಾದನೆಯಲ್ಲಿ ಶೇ 31ರಷ್ಟು ಹೆಚ್ಚಳವಾಗಿದೆ.
ದೇಶದಾದ್ಯಂತ ನಡೆಯುತ್ತಿರುವ ‘ವಿಕಸಿತ ಕೃಷಿ ಅಭಿಯಾನ’ವು ಕೃಷಿ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡಲಿದೆ. ರೈತರಿಗೆ ಹೊಸ ತಂತ್ರಜ್ಞಾನಗಳ ಕುರಿತು ಅರಿವು ಮೂಡಿಸುತ್ತಿದೆ ಎಂದು ಚೌಹಾಣ್ ಹೇಳಿದ್ದಾರೆ.
‘ಈಗಾಗಲೇ 10 ರಾಜ್ಯಗಳಿಗೆ ಭೇಟಿ ನೀಡಿದ್ದೇನೆ. ಕೆಲವು ಪ್ರದೇಶಗಳಲ್ಲಿನ ತಳಿಗಳು ಕೀಟಗಳಿಗೆ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಂಡಿರುವ ಬಗ್ಗೆ ರೈತರು ಮಾಹಿತಿ ನೀಡಿದ್ದಾರೆ. ಆದರೆ, ಹೆಚ್ಚುತ್ತಿರುವ ನಕಲಿ ಕೀಟನಾಶಕ ಮತ್ತು ಬೆಲೆ ಕುಸಿತದ ಬಗ್ಗೆ ರೈತರು ಆತಂಕ ವ್ಯಕ್ತಪಡಿಸಿದ್ದು, ಹೆಚ್ಚಿನ ರಕ್ಷಣೆ ಬೇಕಿದೆ ಎಂದಿದ್ದಾರೆ’ ಎಂದು ಹೇಳಿದರು.
ಜುಲೈನಿಂದ ಭತ್ತ ಬಿತ್ತನೆ ಶುರುವಾಗಲಿದೆ. ನೈರುತ್ಯ ಮಾನ್ಸೂನ್ ಜೂನ್ 12ರಿಂದ 18ರ ನಡುವೆ ಬಲ ಪಡೆದುಕೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ ಎಂದು ಚೌಹಾಣ್ ಹೇಳಿದ್ದಾರೆ.
ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಕಾಳುಗಳ ಉತ್ಪಾದನೆಯಲ್ಲಿ ಸುಧಾರಣೆ ಇದೆ. ಆದರೆ, ದೇಶವು ಸ್ವಾವಲಂಬನೆ ಸಾಧಿಸಲು ಮತ್ತು ಆಮದು ತಗ್ಗಿಸಲು ಇನ್ನೂ ಬಹು ದೂರ ಸಾಗಬೇಕಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.