ADVERTISEMENT

ಗೋಧಿ ದಾಸ್ತಾನು ಮಿತಿ ಇನ್ನಷ್ಟು ತಗ್ಗಿಸಿದ ಕೇಂದ್ರ ಸರ್ಕಾರ

ಬೆಲೆ ಏರಿಕೆ ನಿಯಂತ್ರಿಸಲು ಕ್ರಮ: ಆಹಾರ ಕಾರ್ಯದರ್ಶಿ ಸಂಜೀವ್

ಪಿಟಿಐ
Published 14 ಸೆಪ್ಟೆಂಬರ್ 2023, 15:45 IST
Last Updated 14 ಸೆಪ್ಟೆಂಬರ್ 2023, 15:45 IST
<div class="paragraphs"><p>ಗೋಧಿ </p></div>

ಗೋಧಿ

   

ಸಾಂಕೇತಿಕ ಚಿತ್ರ

ನವದೆಹಲಿ: ಗೋಧಿ ಬೆಲೆಯು ಏರಿಕೆ ಕಾಣುತ್ತಿರುವುದರಿಂದ ಕೇಂದ್ರ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಗೋಧಿ ದಾಸ್ತಾನು ಮಿತಿಯನ್ನು ಇನ್ನಷ್ಟು ತಗ್ಗಿಸಿದೆ. ದಾಸ್ತಾನು ಮಿತಿಯನ್ನು ಕಡಿಮೆ ಮಾಡಿಕೊಳ್ಳಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ.

ADVERTISEMENT

ವರ್ತಕರು, ಸಗಟು ವ್ಯಾಪಾರಿಗಳು ಮತ್ತು ದೊಡ್ಡ ಪ್ರಮಾಣದಲ್ಲಿ ವಹಿವಾಟು ನಡೆಸುವ ಮಳಿಗೆಗಳಿಗೆ ಗೋಧಿ ದಾಸ್ತಾನಿಗೆ ವಿಧಿಸಿದ್ದ 3 ಸಾವಿರ ಟನ್‌ ಮಿತಿಯನ್ನು 2 ಸಾವಿರ ಟನ್‌ಗೆ ಇಳಿಕೆ ಮಾಡಲಾಗಿದೆ.

ಗೋಧಿ ಬೆಲೆಯಲ್ಲಿ ಈಚೆಗೆ ಆಗಿರುವ ಏರಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ದಾಸ್ತಾನು ಮಿತಿಯನ್ನು 2 ಸಾವಿರ ಟನ್‌ಗಳಿಗೆ ಇಳಿಕೆ ಮಾಡಲು ನಿರ್ಧರಿಸಲಾಗಿದೆ  ಎಂದು ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ತಿಳಿಸಿದ್ದಾರೆ.

ರಿಟೇಲ್‌ ದರವು ಸದ್ಯ ಕೆ.ಜಿಗೆ ₹30ರಷ್ಟು ಇದೆ. ಆದರೆ, ಎನ್‌ಸಿಡಿಎಎಕ್ಸ್‌ನಲ್ಲಿ ಗೋಧಿ ಬೆಲೆಯು ಒಂದು ತಿಂಗಳಿನಲ್ಲಿ ಶೇ 4ರಷ್ಟು ಹೆಚ್ಚಾಗಿದ್ದು ಕ್ವಿಂಟಲ್‌ಗೆ ₹2,550ಕ್ಕೆ ಏರಿಕೆ ಆಗಿದೆ. ಇದರ ಪರಿಣಾಮವು ರಿಟೇಲ್‌ ಮಾರುಕಟ್ಟೆಯ ಮೇಲೆ ಆಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

‘ಹಬ್ಬದ ಋತುವಿನಲ್ಲಿ ತೀವ್ರ ಹೆಚ್ಚಳ ಇಲ್ಲ’

ದೇಶದಲ್ಲಿ ಆಹಾರ ಉತ್ಪನ್ನಗಳ ಪೂರೈಕೆ ಸಾಕಷ್ಟು ಪ್ರಮಾಣದಲ್ಲಿ ಇದೆ. ದಾಸ್ತಾನುದಾರರ ಮೇಲೆ ಕೇಂದ್ರ ಸರ್ಕಾರ ನಿಗಾ ಇಟ್ಟಿದೆ. ಹೀಗಾಗಿ ಅಕ್ಕಿ ಗೋಧಿ ಸಕ್ಕರೆ ಮತ್ತು ಅಡುಗೆ ಎಣ್ಣೆಯ ರಿಟೇಲ್‌ ಮಾರಾಟ ದರವು ಮುಂಬರುವ ಹಬ್ಬದ ಋತುವಿನಲ್ಲಿ ತೀವ್ರ ಏರಿಕೆ ಕಾಣುವ ಸಾಧ್ಯತೆ ಕಡಿಮೆ ಎಂದು ಚೋಪ್ರಾ ಹೇಳಿದ್ದಾರೆ.

ದೇಶದಲ್ಲಿ ಸಕ್ಕರೆ ದಾಸ್ತಾನು ಪ್ರಮಾಣವು 85 ಲಕ್ಷ ಟನ್‌ ಇದ್ದು ಮೂರರಿಂದ ಮೂರೂವರೆ ತಿಂಗಳವರೆಗೆ ಬಳಕೆಗೆ ಸಾಕಾಗುತ್ತದೆ. ಹಬ್ಬದ ಋತುವಿಗೆ ಸರ್ಕಾರ ಸಜ್ಜಾಗಿದೆ. 25 ಲಕ್ಷ ಟನ್‌ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಆಗಸ್ಟ್‌ನಲ್ಲಿ 2 ಲಕ್ಷ ಟನ್‌ನಷ್ಟು ಹೆಚ್ಚುವರಿಯಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅಕ್ಕಿ ಬೆಲೆಯ ಮೇಲೆ ನಿಗಾ ಇಡಲಾಗಿದೆ. ಅಕ್ಕಿ ಬೆಲೆಯು ಶೇ 10ರಷ್ಟು ಏರಿಕೆ ಕಂಡಿರುವುದು ಆತಂಕ ಮೂಡಿಸಿದೆ. ಮುಂಗಾರು ಈ ವರ್ಷ ಉತ್ತಮವಾಗಿ ಇಲ್ಲ. ಹೀಗಾಗಿ ಉತ್ಪಾದನೆಯ ಕಡಿಮೆ ಆಗಲಿದೆ ಎನ್ನುವ ಭಾವನೆ ಸೃಷ್ಟಿಸಲಾಗುತ್ತಿದೆ. ಅಕ್ಕಿ ಬೆಲೆ ಏರಿಕೆಗೆ ಇದು ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ಕೆಲವರು ಅಗತ್ಯಕ್ಕಿಂತಲೂ ಹೆಚ್ಚು ಗೋಧಿ ದಾಸ್ತಾನು ಹೊಂದುವ ಮೂಲಕ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ. ಇದರಿಂದಾಗಿ ಅನಗತ್ಯವಾಗಿ ಬೆಲೆ ಏರಿಕೆ ಆಗುತ್ತಿದೆ
-ಸಂಜೀವ್ ಚೋಪ್ರಾ ಕೇಂದ್ರ ಆಹಾರ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.