ADVERTISEMENT

ಜಿಎಸ್‌ಟಿ ಕಾಯ್ದೆ: ಕೆಲವು ಶಿಕ್ಷಾರ್ಹ ಅಪರಾಧಗಳು ಹೊರಕ್ಕೆ?

ಕಾಯ್ದೆಯಲ್ಲಿ ಬದಲಾವಣೆ ತರಲು ಕೇಂದ್ರ ಸರ್ಕಾರದ ಪರಿಶೀಲನೆ

ಪಿಟಿಐ
Published 20 ನವೆಂಬರ್ 2022, 15:32 IST
Last Updated 20 ನವೆಂಬರ್ 2022, 15:32 IST
   

ನವದೆಹಲಿ: ಭಾರತೀಯ ದಂಡ ಸಂಹಿತೆಯಲ್ಲಿ (ಐಪಿಸಿ) ಅಡಕವಾಗಿರುವ ಶಿಕ್ಷಾರ್ಹ ಅಪರಾಧಗಳ ಉಲ್ಲೇಖವನ್ನು ಜಿಎಸ್‌ಟಿ ಕಾಯ್ದೆಯಿಂದ ತೆಗೆಯುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸಿದೆ. ಜಿಎಸ್‌ಟಿ ಕಾಯ್ದೆಯನ್ನು ತೆರಿಗೆ ಪಾವತಿದಾರರಿಗೆ ಇನ್ನಷ್ಟು ಸ್ನೇಹಿ ಆಗಿಸುವ ಉದ್ದೇಶ ಇದರ ಹಿಂದಿದೆ.

ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಜಿಎಸ್‌ಟಿ ಮಂಡಳಿಯ ಮುಂದಿನ ಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ. ಇದಕ್ಕೆ ಮಂಡಳಿಯ ಒಪ್ಪಿಗೆ ದೊರೆತಲ್ಲಿ, ಕೇಂದ್ರ ಹಣಕಾಸು ಸಚಿವಾಲಯವು ಜಿಎಸ್‌ಟಿ ಕಾಯ್ದೆಗೆ ಸೂಕ್ತ ತಿದ್ದುಪಡಿಗಳನ್ನು ಶಿಫಾರಸು ಮಾಡಲಿದೆ. ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

‘ಜಿಎಸ್‌ಟಿ ಕಾಯ್ದೆಯ ಸೆಕ್ಷನ್‌ 132ರಲ್ಲಿ ತರಬೇಕಿರುವ ಬದಲಾವಣೆಗಳನ್ನು ಕಾನೂನು ಸಮಿತಿಯು ಅಂತಿಮಗೊಳಿಸಿದೆ’ ಎಂದು ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಐಪಿಸಿಯಲ್ಲಿ ವಿವರಿಸಲಾಗಿರುವ ರೀತಿಯ ಶಿಕ್ಷಾರ್ಹ ಅಪರಾಧಗಳ ಉಲ್ಲೇಖವನ್ನು ಜಿಎಸ್‌ಟಿ ಕಾಯ್ದೆಯಿಂದ ತೆಗೆಯಬಹುದು ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಿದ್ದುಪಡಿಗಳಿಗೆ ಸಂಸತ್ತಿನ ಅನುಮೋದನೆ ದೊರೆತ ನಂತರದಲ್ಲಿ ರಾಜ್ಯಗಳು ತಮ್ಮ ಜಿಎಸ್‌ಟಿ ಕಾಯ್ದೆಯಲ್ಲಿ ಸೂಕ್ತ ಬದಲಾವಣೆಗಳನ್ನು ತರಬೇಕಾಗುತ್ತದೆ.

ನಕಲಿ ಇನ್‌ವಾಯ್ಸ್‌ಗಳನ್ನು ನೀಡುವುದು ಮತ್ತು ಸ್ವೀಕರಿಸುವುದನ್ನು ಐಪಿಸಿಗೆ ಮಾತ್ರ ಅನುಗುಣವಾಗಿ ಶಿಕ್ಷೆಗೆ ಗುರಿಪಡಿಸುವ ಸಾಧ್ಯತೆ ಇದೆ ಎಂದು ಎಎಂಆರ್‌ಜಿ ಆ್ಯಂಡ್‌ ಅಸೋಸಿಯೇಟ್ಸ್‌ನ ಹಿರಿಯ ಪಾಲುದಾರ, ತೆರಿಗೆ ತಜ್ಞ ರಜತ್ ಮೋಹನ್ ಹೇಳಿದ್ದಾರೆ.

‘ವಂಚನೆಗೆ ಐಪಿಸಿ ಅಡಿಯಲ್ಲಿ ಗರಿಷ್ಠ ಏಳು ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಬಹುದು. ಆದರೆ ಜಿಎಸ್‌ಟಿ ಕಾಯ್ದೆಯ ಅಡಿಯಲ್ಲಿ, ವಂಚನೆಗೆ ಐದು ವರ್ಷಗಳವರೆಗೆ ಮಾತ್ರ ಜೈಲುಶಿಕ್ಷೆ ವಿಧಿಸಬಹುದು. ಈಗ ತರಲು ಉದ್ದೇಶಿಸಿರುವ ಬದಲಾವಣೆಯು, ತೆರಿಗೆ ವಂಚನೆಯ ಮೊತ್ತ ಎಷ್ಟೇ ಇದ್ದರೂ ಅಪರಾಧಿಗಳಿಗೆ ಗರಿಷ್ಠ ಏಳು ವರ್ಷಗಳವರೆಗೆ ಶಿಕ್ಷೆ ವಿಧಿಸಲು ಅವಕಾಶ ಕೊಡಬಹುದು’ ಎಂದು ಅವರು ವಿವರಿಸಿದ್ದಾರೆ.

ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 132ರ ಅಡಿಯಲ್ಲಿ ಈಗ ಇರುವ ಅವಕಾಶಗಳ ಪ್ರಕಾರ, ವಂಚನೆ ಆಗಿರುವ ತೆರಿಗೆ ಮೊತ್ತ ಆಧರಿಸಿ ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ ಎಂದು ಮೋಹನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.