ADVERTISEMENT

ಹಣದುಬ್ಬರ- ಆರ್‌ಬಿಐ ವರದಿ ಬಹಿರಂಗ ಇಲ್ಲ: ಚೌಧರಿ

3 ತ್ರೈಮಾಸಿಕಗಳಲ್ಲಿ ಹಣದುಬ್ಬರ ನಿಯಂತ್ರಿಸಲು ವಿಫಲ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2022, 16:30 IST
Last Updated 12 ಡಿಸೆಂಬರ್ 2022, 16:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಚಿಲ್ಲರೆ ಹಣದುಬ್ಬರವನ್ನು ಶೇ 6ರಲ್ಲಿ ನಿಯಂತ್ರಿಸಲು ಸತತವಾಗಿ ಮೂರು ತ್ರೈಮಾಸಿಕಗಳಲ್ಲಿ ವಿಫಲ ಆಗಿರುವ ಕುರಿತು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನೀಡಿರುವ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.

ಆರ್‌ಬಿಐ ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದೆ. ಆದರೆ 1934ರ ಆರ್‌ಬಿಐ ಕಾಯ್ದೆಯ ನಿಬಂಧನೆಗಳು ಹಾಗೂ ಆರ್‌ಬಿಐ ಹಣಕಾಸು ನೀತಿ ಸಮಿತಿ ಮತ್ತು ಹಣಕಾಸು ನೀತಿ ಪ್ರಕ್ರಿಯೆಯ ನಿಯಮಗಳು ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಅವಕಾಶ ನೀಡುವುದಿಲ್ಲ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್‌ ಚೌಧರಿ ಅವರು ಸಂಸತ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿಯು (ಎಂಪಿಸಿ) ವರದಿಯನ್ನು ಸಿದ್ಧಪಡಿಸಲಿದೆ.

2022ರ ಜನವರಿಯಿಂದ–ಸೆಪ್ಟೆಂಬರ್‌ ಅವಧಿಯಲ್ಲಿ ಚಿಲ್ಲರೆ ಹಣದುಬ್ಬರವು ಶೇ 6ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಇತ್ತು. ಜನವರಿ–ಮಾರ್ಚ್ ತ್ರೈಮಾಸಿಕದಲ್ಲಿ ಹಣದುಬ್ಬರವು ಶೇ 6.3ರಷ್ಟು, ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ಶೇ 7.3ರಷ್ಟು ಹಾಗೂ ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ 7ರಷ್ಟು ಇತ್ತು.

ADVERTISEMENT

ಹಣದುಬ್ಬರವನ್ನು ನಿಯಂತ್ರಿಸಲು ಮುಂಚಿತವಾಗಿಯೇ ಕ್ರಮ ಕೈಗೊಂಡಿದ್ದಲ್ಲಿ ಅದರಿಂದ ಆರ್ಥಿಕತೆ ಮತ್ತು ನಾಗರಿಕರು ಹೆಚ್ಚಿನ ಬೆಲೆ ತೆರಬೇಕಾಗುತ್ತಿತ್ತು ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅವರು ಈಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಆ ಮೂಲಕ ಬೆಲೆ ಏರಿಕೆ ಪರಿಸ್ಥಿತಿಯನ್ನು ನಿರ್ವಹಣೆಯ ಮಾಡಿರುವ ರೀತಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಹಣದುಬ್ಬರ ನಿಯಂತ್ರಣದಲ್ಲಿ ಆರ್‌ಬಿಐ ವಿಫಲವಾಗಿರುವುದನ್ನು ಒಪ್ಪಿಕೊಂಡ ಅವರು, ಹಣದುಬ್ಬರದಲ್ಲಿ ಆಗುತ್ತಿರುವ ಏರಿಕೆಗೆ ಅನುಗುಣವಾಗಿ ಬಡ್ಡಿದರ ಹೆಚ್ಚಳ ಮಾಡದೇ ಆರ್ಥಿಕತೆಗೆ ಬೆಂಬಲ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.