ADVERTISEMENT

ಆದಾಯ ತೆರಿಗೆ: ವಿದ್ಯುನ್ಮಾನ ಮೌಲ್ಯಮಾಪನ ಅಧಿಸೂಚನೆ

ಪಿಟಿಐ
Published 13 ಸೆಪ್ಟೆಂಬರ್ 2019, 18:45 IST
Last Updated 13 ಸೆಪ್ಟೆಂಬರ್ 2019, 18:45 IST
   

ನವದೆಹಲಿ:ಆದಾಯ ತೆರಿಗೆ ಪಾವತಿದಾರರ ಅನುಕೂಲಕ್ಕೆ ಆರಂಭಿಸಿರುವ ವಿದ್ಯುನ್ಮಾನ ಮೌಲ್ಯಮಾಪನ (ಇ–ಅಸೆಸ್‌ಮೆಂಟ್‌) ಸೌಲಭ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಈ ಸೌಲಭ್ಯದಡಿ ರಾಷ್ಟ್ರೀಯ ಈ–ಮೌಲ್ಯಮಾಪನಾ ಕೇಂದ್ರ ಸ್ಥಾಪಿಸಲಾಗುವುದು. ಆದಾಯ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಪ್ರಕರಣಗಳಲ್ಲಿ ಈ ಕೇಂದ್ರವು ಪಾವತಿದಾರರಿಗೆ ನೋಟಿಸ್‌ ಜಾರಿ ಮಾಡಲಿದೆ. 15 ದಿನಗಳಲ್ಲಿ ತೆರಿಗೆದಾರರು ನೀಡುವ ಪ್ರತಿಕ್ರಿಯೆ ನಂತರ, ಕೇಂದ್ರವು ತೆರಿಗೆ ಅಧಿಕಾರಿಗಳಿಗೆ ಈ ಪ್ರಕರಣದ ವಿಚಾರಣೆ ಹಸ್ತಾಂತರಿಸಲಿದೆ.

ಈ ಯೋಜನೆಯಡಿ ತೆರಿಗೆದಾರರು ಇಲ್ಲವೇ ಅವರ ಅಧಿಕೃತ ಪ್ರತಿನಿಧಿಗಳು ರಾಷ್ಟ್ರೀಯ, ಪ್ರಾದೇಶಿಕ ಅಥವಾ ಈ ಯೋಜನೆಯಡಿ ಸ್ಥಾಪಿಸುವ ಯಾವುದೇ ಘಟಕದಲ್ಲಿ ತೆರಿಗೆ ಅಧಿಕಾರಿಗಳ ಸಮ್ಮುಖದಲ್ಲಿ ಹಾಜರಾಗುವ ಅಗತ್ಯ ಇರುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ADVERTISEMENT

ಒಂದು ವೇಳೆ ತೆರಿಗೆದಾರರು ಅಥವಾ ಅವರ ಪ್ರತಿನಿಧಿಗಳು ಖುದ್ದಾಗಿ ಹಾಜರಾಗಲು ಇಚ್ಛಿಸಿದರೆ ಮಾತ್ರ ಅದಕ್ಕೆ ಅವಕಾಶ ದೊರೆಯಲಿದೆ. ಇಂತಹ ವಿಚಾರಣೆಗಳು ವಿಡಿಯೊ ಕಾನ್‌ಫೆರನ್ಸ್‌ ಮೂಲಕ ನಡೆಸಲು ಅವಕಾಶ ನೀಡಲಾಗುವುದು. ಈ ಹೊಸ ಸೌಲಭ್ಯವು ಅಕ್ಟೋಬರ್‌ 8ರಿಂದ ಜಾರಿಗೆ ಬರಲಿದೆ.

ಆಯ್ಕೆ ಸ್ವಾತಂತ್ರ್ಯ: ‘ತೆರಿಗೆದಾರರು ಇ–ಮೌಲ್ಯಮಾಪನ’ ಸೌಲಭ್ಯವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಹೊಂದಿದ್ದಾರೆ. ಅವರಿಗೆ ಈ ಸೌಲಭ್ಯ ಇಷ್ಟವಾಗದಿದ್ದರೆ, ತೆರಿಗೆ ಇಲಾಖೆಯ ಕಚೇರಿಗೆ ಭೇಟಿ ನೀಡಿ, ದಾಖಲೆಗಳನ್ನು ಸಲ್ಲಿಸುವ ಹಾಲಿ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಐ.ಟಿ ಲೆಕ್ಕಪತ್ರಗಳ ಸಮಗ್ರ ಮೌಲ್ಯಮಾಪನ ಪ್ರಕರಣಗಳಲ್ಲಿ ಸದ್ಯಕ್ಕೆ ತೆರಿಗೆದಾರರು, ಅಧಿಕಾರಿಗಳನ್ನು ನೇರವಾಗಿ ಭೇಟಿಯಾಗಿ ಚರ್ಚಿಸಿ ತಮ್ಮ ಅಹವಾಲು ಸಲ್ಲಿಸಲು ಅವಕಾಶ ಇದೆ. ತೆರಿಗೆದಾರರು ಅಧಿಕಾರಿಗಳನ್ನು ಮುಖತಃ ಭೇಟಿಯಾಗುವುದನ್ನು ತಪ್ಪಿಸಿ, ಮಾನವನ ಹಸ್ತಕ್ಷೇಪ ಇಲ್ಲದೆ ವಿದ್ಯುನ್ಮಾನ ಬಗೆಯಲ್ಲಿ ಮೌಲ್ಯಮಾಪನ ಮಾಡಲು ಹೊಸ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇದನ್ನು ಹಂತ ಹಂತವಾಗಿ ಜಾರಿಗೆ ತರಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.