ADVERTISEMENT

‘ಐಬಿಸಿ’ಗೆ ತಿದ್ದುಪಡಿ; ಸರ್ಕಾರದ ಚಿಂತನೆ

ಪಿಟಿಐ
Published 24 ನವೆಂಬರ್ 2019, 13:41 IST
Last Updated 24 ನವೆಂಬರ್ 2019, 13:41 IST

ನವದೆಹಲಿ : ನಷ್ಟಕ್ಕೆ ಗುರಿಯಾಗಿರುವ ಕಂಪನಿ ಅಥವಾ ಉದ್ದಿಮೆಯ ಆಸ್ತಿ ಖರೀದಿಸಲು ಮುಂದಾಗುವವರಿಗೆ ಪ್ರವರ್ತಕರು ಎದುರಿಸುತ್ತಿರುವ ಹಣಕಾಸು ಅಪರಾಧ ಪ್ರಕರಣಗಳಿಂದ ರಕ್ಷಣೆ ನೀಡಲು ಕೇಂದ್ರ ಸರ್ಕಾರವು ಸಾಲ ವಸೂಲಾತಿ ಮತ್ತು ದಿವಾಳಿ ಸಂಹಿತೆಗೆ (ಐಬಿಸಿ) ತಿದ್ದುಪಡಿ ತರಲು ಮುಂದಾಗಿದೆ.

ಈ ತಿದ್ದುಪಡಿ ಜಾರಿಗೆ ಬಂದರೆ, ಸಾಲ ವಸೂಲಾತಿ ಪ್ರಕ್ರಿಯೆ ಹೆಚ್ಚು ಆಕರ್ಷಕವಾಗಲಿದೆ. ಖರೀದಿದಾರರಲ್ಲಿ ಆತ್ಮವಿಶ್ವಾಸ ಮೂಡಿಸಲು ಸಾಧ್ಯವಾಗಲಿದೆ. ಸಾಲ ವಸೂಲಾತಿ ಪ್ರಕ್ರಿಯೆಗೆ ಒಳಪಟ್ಟಿರುವ ಬಹುತೇಕ ಪ್ರಕರಣಗಳಲ್ಲಿ ಪ್ರವರ್ತಕರ ವಿರುದ್ಧ ವಿವಿಧ ಸಂಸ್ಥೆಗಳಿಂದ ತನಿಖೆ ನಡೆಯುತ್ತಿವೆ. ಇಂತಹ ತನಿಖೆಗಳ ವ್ಯಾಪ್ತಿಯಿಂದ ಆಸ್ತಿ ಖರೀದಿದಾರರನ್ನು ಹೊರಗೆ ಇಡುವುದು ತಿದ್ದುಪಡಿಯ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯಕ್ಕೆ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ‘ದಿವಾಳಿ ಸಂಹಿತೆ–2016’ ತಿದ್ದುಪಡಿ ತರಲಾಗುವುದು.

ADVERTISEMENT

‘ಐಬಿಸಿ’ಯಡಿ ನಡೆಯುವ ಹರಾಜಿನಲ್ಲಿ ಖರೀದಿಸುವ ಆಸ್ತಿಗಳಿಗೆ ಸಂಬಂಧಿಸಿದಂತೆ ಅವುಗಳ ಹಿಂದಿನ ಪ್ರವರ್ತಕರ ವಿರುದ್ಧದ ಕಾನೂನು ಕ್ರಮಗಳ ಸುಳಿಯಲ್ಲಿ ಸಿಲುಕಬೇಕಾಗಿರುವ ಬಗ್ಗೆ ಅನೇಕ ಕಂಪನಿಗಳು ಕಳವಳ ವ್ಯಕ್ತಪಡಿಸಿದ್ದವು. ಈ ಕಾರಣಕ್ಕೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ.

ಹಿಂದಿನ ಆಡಳಿತ ಮಂಡಳಿಯ ನಿರ್ಧಾರಗಳ ಕಾರಣಕ್ಕೆ ಎದುರಿಸುತ್ತಿರುವ ಕ್ರಿಮಿನಲ್‌ ಪ್ರಕರಣಗಳಿಗೂ, ಆಸ್ತಿ ಖರೀದಿಗೆ ಮುಂದೆ ಬಂದವರಿಗೂ ಯಾವುದೇ ಸಂಬಂಧ ಮತ್ತು ಹೊಣೆಗಾರಿಕೆ ಇರದಂತೆ ನೋಡಿಕೊಳ್ಳುವುದು ಸರ್ಕಾರದ ಕಾಳಜಿಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭೂಷಣ್ ಪವರ್‌ ಆ್ಯಂಡ್‌ ಸ್ಟೀಲ್‌ ಲಿಮಿಟೆಡ್‌ನ (ಬಿಪಿಎಸ್‌ಎಲ್‌) ಪ್ರಕರಣದಲ್ಲಿನ ಬೆಳವಣಿಗೆಗಳು ಮರುಕಳಿಸದಂತೆ ನೋಡಿಕೊಳ್ಳುವ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.