ADVERTISEMENT

ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಇಳಿಕೆ: ಆಕಸ್ಮಿಕ ಲಾಭ ತೆರಿಗೆ ರದ್ದು

ಪಿಟಿಐ
Published 2 ಡಿಸೆಂಬರ್ 2024, 12:54 IST
Last Updated 2 ಡಿಸೆಂಬರ್ 2024, 12:54 IST
ತೆರಿಗೆ
ತೆರಿಗೆ   

ನವದೆಹಲಿ: ಜಾಗತಿಕ ಮಟ್ಟದಲ್ಲಿ ತೈಲ ಬೆಲೆಯಲ್ಲಿ ಇಳಿಕೆಯಾದ ಕಾರಣ, ದೇಶೀಯವಾಗಿ ಉತ್ಪಾದಿಸುವ ಕಚ್ಚಾ ತೈಲ ಮತ್ತು ವಿಮಾನ ಇಂಧನ (ಎಟಿಎಫ್), ಡೀಸೆಲ್ ಮತ್ತು ಪೆಟ್ರೋಲ್ ರಫ್ತಿನ ಮೇಲೆ ವಿಧಿಸುತ್ತಿದ್ದ ಆಕಸ್ಮಿಕ ಲಾಭ ತೆರಿಗೆಯನ್ನು ಕೇಂದ್ರ ಸರ್ಕಾರ ಸೋಮವಾರ ರದ್ದುಗೊಳಿಸಿದೆ.

ಕಚ್ಚಾ ತೈಲದ ಮೇಲಿನ ಆಕಸ್ಮಿಕ ಲಾಭ ತೆರಿಗೆಯನ್ನು ರದ್ದುಗೊಳಿಸುವ ಅಧಿಸೂಚನೆಯನ್ನು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ರಾಜ್ಯಸಭೆಯಲ್ಲಿ ಮಂಡಿಸಿದರು.

2022ರ ಜುಲೈ 1ರಂದು ಈ ತೆರಿಗೆಯನ್ನು ಕೇಂದ್ರ ಸರ್ಕಾರ ಮೊದಲ ಬಾರಿಗೆ ಜಾರಿಗೊಳಿಸಿತ್ತು. 30 ತಿಂಗಳ ಬಳಿಕ ರದ್ದುಗೊಳಿಸಿದೆ. ಜೊತೆಗೆ, ಪೆಟ್ರೋಲ್ ಮತ್ತು ಡೀಸೆಲ್ ರಫ್ತಿನ ಮೇಲೆ ವಿಧಿಸಲಾಗಿದ್ದ ರಸ್ತೆ ಮತ್ತು ಮೂಲಸೌಕರ್ಯ ಸೆಸ್ ಅನ್ನು ಸಹ ಹಿಂಪಡೆಯಲಾಗಿದೆ.

ADVERTISEMENT

ಜಾರಿ ವೇಳೆ, ಪೆಟ್ರೋಲ್ ಮತ್ತು ವಿಮಾನ ಇಂಧನದ ಮೇಲೆ ಪ್ರತಿ ಲೀಟರ್‌ಗೆ ₹6 ಮತ್ತು ಡೀಸೆಲ್‌ ಲೀಟರ್‌ಗೆ ₹13 ರಫ್ತು ಸುಂಕವನ್ನು ವಿಧಿಸಲಾಯಿತು. ದೇಶೀಯವಾಗಿ ಉತ್ಪಾದಿಸುವ ಕಚ್ಚಾ ತೈಲಕ್ಕೆ ಪ್ರತಿ ಟನ್‌ಗೆ ₹23,250 ವಿಧಿಸಲಾಗುತ್ತಿತ್ತು. ವಿಶೇಷ ಹೆಚ್ಚುವರಿ ಅಬಕಾರಿ ಸುಂಕದ (ಎಸ್‌ಎಇಡಿ) ರೂಪದಲ್ಲಿ ಕೇಂದ್ರವು ಈ ತೆರಿಗೆ ವಿಧಿಸುತ್ತಿತ್ತು.

ಈಗ, ದೇಶೀಯವಾಗಿ ಉತ್ಪಾದಿಸುವ ಕಚ್ಚಾ ತೈಲ ಮತ್ತು ಇಂಧನ ರಫ್ತು ಎರಡರ ಮೇಲಿನ ಸುಂಕಗಳನ್ನು ರದ್ದುಗೊಳಿಸಲಾಗಿದೆ. ಈ ತೆರಿಗೆಯಿಂದ 2022–23ರಲ್ಲಿ ₹25 ಸಾವಿರ ಕೋಟಿ, 2023–24ರಲ್ಲಿ ₹13 ಸಾವಿರ ಕೋಟಿ ಮತ್ತು 2024–25ರ ಇದುವರೆಗೆ ₹6 ಸಾವಿರ ಕೋಟಿ ಸರ್ಕಾರ ಸಂಗ್ರಹಿಸಿದೆ.

ಭಾರತ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಸರಾಸರಿ ದರವು ಅಕ್ಟೋಬರ್‌ನಲ್ಲಿ ಪ್ರತಿ ಬ್ಯಾರೆಲ್‌ಗೆ 75.12 ಡಾಲರ್‌ (₹6,363) ಇತ್ತು. ನವೆಂಬರ್‌ನಲ್ಲಿ 73.02 ಡಾಲರ್‌ಗೆ (₹6,185) ಇಳಿದಿದೆ. ಏಪ್ರಿಲ್‌ನಲ್ಲಿ 90 ಡಾಲರ್‌ (₹7,624) ಇತ್ತು.

ರದ್ದು ಏಕೆ?: 

ಈ ತೆರಿಗೆ ಹೇರಿಕೆಯು ಸರ್ಕಾರ ಮತ್ತು ತೈಲ ಕಂಪನಿಗಳ ನಡುವೆ ವಿವಾದದ ವಿಷಯವಾಯಿತು. ಆರಂಭದಲ್ಲಿ ತೈಲ ದರ ಏರಿಳಿತದಿಂದ ಸರ್ಕಾರ ವರಮಾನವನ್ನು ಸಮತೋಲನಗೊಳಿಸಲು ಪ್ರಯತ್ನಿಸಿದಾಗ, ಕಂಪನಿಗಳು ಇದು ಲಾಭದಾಯಕತೆ ಮತ್ತು ಪ್ರೋತ್ಸಾಹಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದ್ದವು. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಕೂಡ ಈ ತೆರಿಗೆಯನ್ನು ರದ್ದುಗೊಳಿಸುವಂತೆ ಕೇಳಿತ್ತು.

ಇದೀಗ ಆಕಸ್ಮಿಕ ಲಾಭ ತೆರಿಗೆಯನ್ನು ತೆಗೆದು ಹಾಕಿರುವುದರಿಂದ ಒಎನ್‌ಜಿಸಿ ಮತ್ತು ಭಾರತೀಯ ತೈಲ ನಿಗಮಕ್ಕೆ ಲಾಭವಾಗುತ್ತದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ನಯಾರಾ ಎನರ್ಜಿ ಕಂಪನಿಗಳು ದೇಶದಿಂದ ಇಂಧನವನ್ನು ರಫ್ತು ಮಾಡುತ್ತಿವೆ. ಈ ತೆರಿಗೆ ರದ್ದುಗೊಳಿಸಿರುವುದು ಈ ಕಂಪನಿಗಳಿಗೂ ಅನುಕೂಲವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.