ನವದೆಹಲಿ: ಕೇಂದ್ರ ಸರ್ಕಾರವು ಏಪ್ರಿಲ್‌ನಿಂದ ಆರಂಭವಾಗಲಿರುವ 2025–26ನೇ ಮಾರುಕಟ್ಟೆ ವರ್ಷದಲ್ಲಿ 31 ದಶಲಕ್ಷ ಟನ್‌ನಷ್ಟು ಗೋಧಿ ಖರೀದಿಗೆ ನಿರ್ಧರಿಸಿದೆ. ಪ್ರತಿ ಕ್ವಿಂಟಲ್ ಗೋಧಿಗೆ ₹2,425 ಬೆಂಬಲ ಬೆಲೆ ನಿಗದಿಪಡಿಸಿದೆ.
2024–25ನೇ ಬೆಳೆ ವರ್ಷದಲ್ಲಿ (ಜುಲೈನಿಂದ ಜೂನ್) 115 ದಶಲಕ್ಷ ಟನ್ ಗೋಧಿ ಉತ್ಪಾದನೆಯಾಗಿದೆ. ಇದರಿಂದ ಕೇಂದ್ರ ಕೃಷಿ ಸಚಿವಾಲಯವು ಸಂಗ್ರಹಣೆಯ ಗುರಿಯನ್ನು ಮಿತಿಗೊಳಿಸಿದೆ.
ರಾಜ್ಯಗಳ ಆಹಾರ ಕಾರ್ಯದರ್ಶಿಗಳ ಜೊತೆಗೆ ನಡೆದ ಸಭೆಯಲ್ಲಿ ಹಿಂಗಾರು ಅವಧಿಯಲ್ಲಿ ಬೆಳೆದಿರುವ ಗೋಧಿ, ಭತ್ತ ಹಾಗೂ ಒರಟು ಧಾನ್ಯಗಳ ಖರೀದಿಗೆ ಸಂಬಂಧಿಸಿದಂತೆ ಚರ್ಚಿಸಿದ ಬಳಿಕ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ.
2025–26ನೇ ಮಾರುಕಟ್ಟೆ ವರ್ಷದಲ್ಲಿ ಅಕ್ಕಿ 70 ಲಕ್ಷ ಟನ್ ಮತ್ತು ರಾಗಿ, ಜೋಳ, ಸಜ್ಜೆ ಸೇರಿ ಒಟ್ಟು 16 ಲಕ್ಷ ಟನ್ ಒರಟು ಧಾನ್ಯಗಳನ್ನು ಖರೀದಿಸುವ ಗುರಿ ಹೊಂದಿದೆ.
ನಿಗದಿತ ಗುರಿಗಿಂತ ಅತಿಹೆಚ್ಚು ಪ್ರಮಾಣದಲ್ಲಿ ಗೋಧಿ ಮತ್ತು ಅಕ್ಕಿ ಖರೀದಿಸಬೇಕು. ದೇಶದಲ್ಲಿ ಅಪೌಷ್ಟಿಕತೆ ನಿವಾರಣೆಯ ದೃಷ್ಟಿಯಿಂದ ಸಿರಿಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಬೇಕು. ಇದರಿಂದ ಬೆಳೆ ವೈವಿಧ್ಯಕ್ಕೆ ನೆರವಾಗಲಿದೆ ಎಂದು ರಾಜ್ಯಗಳು, ಕೇಂದ್ರಕ್ಕೆ ಮನವಿ ಮಾಡಿವೆ.
ಭಾರತೀಯ ಆಹಾರ ನಿಗಮ ಮತ್ತು ಆಯಾ ರಾಜ್ಯದ ಖರೀದಿ ಏಜೆನ್ಸಿಗಳು ರೈತರಿಂದ ಗೋಧಿ ಖರೀದಿಸಲಿವೆ. ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳಿಗೆ ಹಂಚಿಕೆ ಮಾಡಲಾಗುತ್ತದೆ.
2024–25ರಲ್ಲಿ 30ರಿಂದ 32 ದಶಲಕ್ಷ ಟನ್ ಗೋಧಿ ಖರೀದಿಸುವ ಗುರಿ ಹೊಂದಲಾಗಿತ್ತು. ಈ ಪೈಕಿ 26.6 ದಶಲಕ್ಷ ಟನ್ ಖರೀದಿಸಲಾಗಿತ್ತು. 2023–24ರಲ್ಲಿ ನಿಗದಿಯಾಗಿದ್ದ 34.15 ದಶಲಕ್ಷ ಟನ್ ಖರೀದಿಸುವ ಗುರಿಯ ಪೈಕಿ, 26.2 ದಶಲಕ್ಷ ಟನ್ ಖರೀದಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.