ADVERTISEMENT

ಎಲ್‌ಪಿಜಿ: ತೈಲ ಕಂಪನಿಗಳಿಗೆ ₹35 ಸಾವಿರ ಕೋಟಿ ಸಬ್ಸಿಡಿ

ಪಿಟಿಐ
Published 9 ಜನವರಿ 2025, 13:18 IST
Last Updated 9 ಜನವರಿ 2025, 13:18 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕಳೆದ ವರ್ಷದ ಮಾರ್ಚ್‌ನಿಂದ ಅಡುಗೆ ಅನಿಲ ಸಿಲಿಂಡರ್‌ ದರ ಪರಿಷ್ಕರಿಸದೆ ಯಥಾಸ್ಥಿತಿ ಕಾಯ್ದುಕೊಂಡಿರುವ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಕೇಂದ್ರ ಸರ್ಕಾರವು ₹35 ಸಾವಿರ ಕೋಟಿ ಸಬ್ಸಿಡಿ ಮೊತ್ತ ಪಾವತಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ 14.2 ಕೆ.ಜಿ ತೂಕದ ಅಡುಗೆ ಅನಿಲ ಸಿಲಿಂಡರ್‌ಗೆ ₹803 ದರವಿದೆ. ಪ್ರತಿ ಸಿಲಿಂಡರ್‌ ಮಾರಾಟದಿಂದ ಕಂಪನಿಗಳಿಗೆ ₹240 ನಷ್ಟವಾಗುತ್ತಿದೆ.

ಭಾರತೀಯ ತೈಲ ನಿಗಮ (ಐಒಸಿ), ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಬಿಪಿಸಿಎಲ್‌) ಹಾಗೂ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ಗೆ (ಎಚ್‌ಪಿಸಿಎಲ್‌) ಈ ಪರಿಹಾರ ಧನ ದೊರೆಯಲಿದೆ. 

ADVERTISEMENT

ಅಡುಗೆ ಅನಿಲದ ಉತ್ಪಾದನೆಗೆ ಬಳಕೆಯಾಗುವ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದ ಕಂಪನಿಗಳಿಗೆ ಹೊರೆ ಹೆಚ್ಚುತ್ತಿದೆ. 2024–25ನೇ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ (ಏಪ್ರಿಲ್‌–ಸೆಪ್ಟೆಂಬರ್‌) ಅವುಗಳ ನಿವ್ವಳ ಲಾಭದಲ್ಲಿ ಇಳಿಕೆಯಾಗಿದೆ. ಈ ನಷ್ಟ ತುಂಬಿಕೊಳ್ಳಲು ಈ ಸಬ್ಸಿಡಿ ಮೊತ್ತವು ನೆರವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಎಲ್‌ಪಿಜಿ ಮಾರಾಟದಿಂದ ವಸೂಲಿ ಮಾಡಬೇಕಿರುವ ಮೊತ್ತ ₹40,500 ಕೋಟಿ ಆಗಿದೆ. ಈ ಪೈಕಿ ಸರ್ಕಾರವು ₹35 ಸಾವಿರ ಕೋಟಿಯನ್ನಷ್ಟೇ ನೀಡುವ ಸಾಧ್ಯತೆಯಿದೆ ಎಂದು ಹೇಳಿವೆ.

ಈ ಆರ್ಥಿಕ ವರ್ಷದಲ್ಲಿ ಕಂಪನಿಗಳು ₹10 ಸಾವಿರ ಕೋಟಿ ಹಾಗೂ 2025–26ನೇ ಆರ್ಥಿಕ ವರ್ಷದಲ್ಲಿ ₹25 ಸಾವಿರ ಕೋಟಿ ನೆರವು ಪಡೆಯುವ ಸಾಧ್ಯತೆಯಿದೆ. ಫೆಬ್ರುವರಿ 1ರಂದು ಮಂಡನೆಯಾಗುವ 2025–26ನೇ ಸಾಲಿನ ಬಜೆಟ್‌ನಲ್ಲಿ ಈ ನೆರವನ್ನು ಒದಗಿಸುವ ಸಾಧ್ಯತೆಯಿದೆ ಎಂದು ವಿವರಿಸಿವೆ.

ಕುಟುಂಬಗಳಿಗೆ ಆರ್ಥಿಕ ಹೊರೆ ತಗ್ಗಿಸುವ ದೃಷ್ಟಿಯಿಂದ ಕೇಂದ್ರವು ದೇಶೀಯ ಮಾರುಕಟ್ಟೆಯಲ್ಲಿ ಎಲ್‌ಪಿಜಿ ದರವನ್ನು ನಿಯಂತ್ರಿಸುತ್ತದೆ. ಸ್ಥಳೀಯ ದರಕ್ಕಿಂತ ಜಾಗತಿಕ ಮಾರುಕಟ್ಟೆಯಲ್ಲಿ ಸೌದಿ ಸಿಪಿ (ಎಲ್‌ಪಿಜಿ ಬೆಲೆ ನಿಗದಿಗೆ ಆಧಾರವಾಗಿರುವ ಬೆಲೆ) ಹೆಚ್ಚಿದೆ. ಭಾರತದಲ್ಲಿ ಉತ್ಪಾದನೆಯಾಗುವ ಎಲ್‌ಪಿಜಿಯು ದೇಶೀಯ  ಬೇಡಿಕೆಗೆ ಸಾಕಾಗುತ್ತಿಲ್ಲ. ಹಾಗಾಗಿ, ಆಮದು ಮಾಡಿಕೊಳ್ಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.