ಶಿವರಾಜ್ ಸಿಂಗ್ ಚೌಹಾಣ್
–ಪಿಟಿಐ ಚಿತ್ರ
ನವದೆಹಲಿ: ರೈತರಿಗೆ ಆಧುನಿಕ ತಂತ್ರಜ್ಞಾನ ಮತ್ತು ಹೊಸ ಬಿತ್ತನೆ ತಳಿಗಳ ಬಗ್ಗೆ ಅರಿವು ಮೂಡಿಸಲು ಕೇಂದ್ರ ಸರ್ಕಾರವು ಮೇ 29ರಿಂದ ಜೂನ್ 12ರ ವರೆಗೆ ದೇಶದಾದ್ಯಂತ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಹಮ್ಮಿಕೊಂಡಿದೆ.
15 ದಿನಗಳವರೆಗೆ ನಡೆಯುವ ಈ ಅಭಿಯಾನದಡಿ 1.5 ಕೋಟಿ ರೈತರಿಗೆ ಜಾಗೃತಿ ಮೂಡಿಸಲಾಗುತ್ತದೆ. ಆ ಮೂಲಕ ಮುಂಗಾರು ಅವಧಿಯಲ್ಲಿ ಉತ್ಪಾದನೆ ಹೆಚ್ಚಿಸುವ ಗುರಿ ಹೊಂದಲಾಗಿದೆ.
‘ಕೃಷಿ ವಿಜ್ಞಾನಿಗಳು, ಅಧಿಕಾರಿಗಳು, ಪ್ರಗತಿಪರ ರೈತರನ್ನು ಒಳಗೊಂಡ 2 ಸಾವಿರ ತಂಡಗಳ ಮೂಲಕ ಜಿಲ್ಲಾಮಟ್ಟದಲ್ಲಿ ಪ್ರತಿ ದಿನ ಮೂರು ಸಭೆ ನಡೆಸಲು ಉದ್ದೇಶಿಸಲಾಗಿದೆ. ನಿತ್ಯ 10ರಿಂದ 12 ಲಕ್ಷ ರೈತರಿಗೆ ಅರಿವು ಮೂಡಿಸಲಾಗುತ್ತದೆ’ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಗುರುವಾರ ತಿಳಿಸಿದ್ದಾರೆ.
ಈ ತಂಡವು ಹವಾಮಾನಕ್ಕೆ ಹೊಂದಿಕೊಳ್ಳುವ ತಳಿಗಳು, ರಸಗೊಬ್ಬರದ ಲಭ್ಯತೆ, ಮುಂಗಾರು ಅಂದಾಜು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದೆ ಎಂದು ತಿಳಿಸಿದ್ದಾರೆ.
ನವೀನ ತಂತ್ರಜ್ಞಾನ ಮತ್ತು ಸಂಶೋಧನೆಯ ಪ್ರಯೋಜನವು ರೈತರಿಗೆ ಲಭ್ಯವಾಗಬೇಕು. ಕೃಷಿ ಉತ್ಪಾದನೆಯನ್ನು ಹೆಚ್ಚಿಸಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಈ ಅಭಿಯಾನ ನಡೆಯಲಿದೆ. ರೈತರೊಂದಿಗೆ ನೇರವಾಗಿ ಸಂವಹನ ನಡೆಸುವ ಮೂಲಕ ಶಿಕ್ಷಣ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕಳಪೆ ಬಿತ್ತನೆ ಬೀಜಗಳ ಮಾರಾಟ ನಿಯಂತ್ರಣದ ಮೂಲಕ ರೈತರ ಹಿತಕಾಯಲು ಬೀಜ ಕಾಯ್ದೆ 1966ಕ್ಕೆ ತಿದ್ದುಪಡಿ ತರಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.