ADVERTISEMENT

ಇಸಿಜಿಸಿ ಲಿಮಿಟೆಡ್‌ ಕಂಪನಿ ಐಪಿಒಗೆ ಕೇಂದ್ರ ತೀರ್ಮಾನ

ಪಿಟಿಐ
Published 29 ಸೆಪ್ಟೆಂಬರ್ 2021, 13:53 IST
Last Updated 29 ಸೆಪ್ಟೆಂಬರ್ 2021, 13:53 IST

ನವದೆಹಲಿ: ಸರ್ಕಾರಿ ಸ್ವಾಮ್ಯದ ಇಸಿಜಿಸಿ ಲಿಮಿಟೆಡ್‌ ಕಂಪನಿಗೆ ₹ 4,400 ಕೋಟಿ ಬಂಡವಾಳ ಒದಗಿಸಲು ಕೇಂದ್ರ ಸಚಿವ ಸಂಪುಟವು ಬುಧವಾರ ಅನುಮೋದನೆ ನೀಡಿದೆ. ಅಲ್ಲದೆ, ಈ ಕಂಪನಿಯ ಷೇರುಗಳನ್ನು ಐಪಿಒ ಮೂಲಕ ಸಾರ್ವಜನಿಕರಿಗೆ ಮುಕ್ತವಾಗಿಸುವ ಪ್ರಸ್ತಾವಕ್ಕೂ ಸಂಪುಟ ಸಮ್ಮತಿ ನೀಡಿದೆ.

ಈ ಬಂಡವಾಳವನ್ನು ಐದು ವರ್ಷಗಳ ಅವಧಿಯಲ್ಲಿ ನೀಡಲಾಗುತ್ತದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಅವರು ತಿಳಿಸಿದರು. ಇಸಿಜಿಸಿ ಕಂಪನಿಗೆ ತಕ್ಷಣಕ್ಕೆ ₹ 500 ಕೋಟಿ ಬಂಡವಾಳ ಒದಗಿಸಲಾಗುತ್ತದೆ, ಮುಂದಿನ ಹಣಕಾಸು ವರ್ಷದಲ್ಲಿ ₹ 500 ಕೋಟಿ ಒದಗಿಸಲಾಗುತ್ತದೆ ಎಂದು ಸಚಿವರು ಹೇಳಿದರು.

ಕಂಪನಿಯ ಐಪಿಒ ಪ್ರಕ್ರಿಯೆಯನ್ನು ಸರ್ಕಾರವು ಶೀಘ್ರದಲ್ಲಿಯೇ ಆರಂಭಿಸಲಿದೆ. ಮುಂದಿನ ಹಣಕಾಸು ವರ್ಷದಲ್ಲಿ ಐಪಿಒ ನಡೆಯಲಿದೆ.

ADVERTISEMENT

ರಾಷ್ಟ್ರೀಯ ರಫ್ತು ವಿಮೆ ಖಾತೆ (ಎನ್‌ಇಐಎ) ಯೋಜನೆಯನ್ನು ಮುಂದುವರಿಸುವ ತೀರ್ಮಾನವನ್ನೂ ಕೇಂದ್ರ ಸರ್ಕಾರವು ಕೈಗೊಂಡಿದೆ. ಈ ಯೋಜನೆಗೆ ಮುಂದಿನ ಐದು ವರ್ಷಗಳಲ್ಲಿ ಒಟ್ಟು ₹ 1,650 ಕೋಟಿ ಧನಸಹಾಯ ಒದಗಿಸಲು ತೀರ್ಮಾನಿಸಿದೆ.

ಎನ್‌ಇಐಎಗೆ ಬಂಡವಾಳ ಒದಗಿಸುವ ಕ್ರಮದಿಂದ 2.6 ಲಕ್ಷ ಹೊಸ ಉದ್ಯೋಗ ಸೃಷ್ಟಿಗೆ ಸಹಾಯ ಆಗಲಿದೆ. ಇದರಲ್ಲಿ 12 ಸಾವಿರ ಉದ್ಯೋಗಗಳು ಸಂಘಟಿತ ವಲಯದಲ್ಲಿ ಸೃಷ್ಟಿಯಾಗಲಿವೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.